ದೋಸ್ತಿ ಸರ್ಕಾರಕ್ಕೆ ಚೆಕ್ ಮೇಟ್ ಇಟ್ಟು ಬಿಜೆಪಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಲು ತೆರೆಮರೆಯಲ್ಲಿ ಕೆಲಸ ಮಾಡಿದ್ದ ಸಿ.ಪಿ ಯೋಗೇಶ್ವರ್ ಅವರ ಪರಿಸ್ಥತಿ ಸದ್ಯ ಅತಂತ್ರವಾಗಿದೆ. 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ್ದ ಯೋಗೇಶ್ವರ್, ಹೀನಾಯ ಸೋಲನುಭವಿಸಿದರು. ಆದರೂ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಮೈತ್ರಿ ಸರ್ಕಾರವನ್ನು ಉರುಳಿಸಲು ಯೋಗೇಶ್ವರ್ ಅವರು ತೆರೆಮರೆಯಲ್ಲಿ ಸಾಕಷ್ಟು ಶ್ರಮಿಸಿದ್ದರು. ಆದ್ರೆ ಬಿಜೆಪಿ ಸರ್ಕಾರ ಬರುತ್ತಿದ್ದಂತೆ ನಾನು ಕೂಡ ಸಚಿವ ಸ್ಥಾನದಲ್ಲಿರುತ್ತೇನೆ ಎಂದುಕೊಂಡಿದ್ದ ಯೋಗೇಶ್ವರ್ ಅವರಿಗೆ ದೆಹಲಿ ವರಿಷ್ಠರು ಶಾಕ್ ನೀಡಿದರು. ಬಳಿಕ ಸಂಪುಟ ವಿಸ್ತರಣೆ ಸಮಯದಲ್ಲಿ ಮೂಲ ಬಿಜೆಪಿಗರ ಪಟ್ಟಿಯಲ್ಲಿ ಯೋಗೇಶ್ವರ್ ಹೆಸರಿದೆ ಎನ್ನಲಾಗಿತ್ತು. ಕೊನೆ ಕ್ಷಣಗಳಲ್ಲಿ ಮೂಲ ಬಿಜೆಪಿಗರನ್ನೇ ಕೈ ಬಿಟ್ಟ ಕಾರಣ ಎರಡನೇ ಬಾರಿಗೂ ಯೋಗೇಶ್ವರ್ ಹಿನ್ನಡೆ ಅನುಭವಿಸಬೇಕಾಯ್ತು.
ಹೀಗೆ ಎರಡು ಬಾರಿ ಸಚಿವ ಸ್ಥಾನ ಸಿಗದೇ ಇದ್ದ ಕಾರಣ ಬಿಜೆಪಿ ಸರ್ಕಾರವನ್ನೇ ಕೆಡವಲು ಯೋಗೇಶ್ವರ್ ತಂತ್ರ ಹೆಣೆಯುತ್ತಿದ್ದಾರೆ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದ್ದವು. ಸ್ವತಃ ಪಕ್ಷದಲ್ಲಿದ್ದವರೇ ಯೋಗೇಶ್ವರ್ ಅವರನ್ನು ಮೂಲೆ ಗುಂಪು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ ಕೆಲ ಬಿಜೆಪಿ ನಾಯಕರು ಯೋಗೇಶ್ವರ್ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಆದ್ರೆ ಈಗ ಪರಿಷತ್ ಚುನಾವಣೆಯ ಪ್ರಕ್ರಿಯೆಗಳು ಆರಂಭವಾಗಿದ್ದರೂ ಯೋಗೇಶ್ವರ್ ಅವರ ಸುಳಿವೇ ಇಲ್ಲ. ಹೀಗಾಗಿ ಸಿ.ಪಿ.ಯೋಗೇಶ್ವರ್ ಎಲ್ಲಿದ್ದಾರೆ..? ಹೇಗಿದ್ದಾರೆ..? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹುಟ್ಟಲಾರಂಭಿಸಿದೆ.
ಮುಂಚೂಣಿಗೆ ಬಾರದ ಸಿ.ಪಿ. ಯೋಗೇಶ್ವರ್ ಹೆಸರು…!
ಪಕ್ಷದ ಹಿರಿಯ ನಾಯಕರು ನೀಡಿದ್ದ ಭರವಸೆಯನ್ನೇ ನಂಬಿಕೊಂಡು ಬಿಜೆಪಿಗೆ ಸಿಗುವ ನಾಲ್ಕು ಸ್ಥಾನಗಳಲ್ಲಿ ಒಂದು ಸ್ಥಾನ ನನಗೆ ನಿಶ್ಚಿತ ಎಂದುಕೊಂಡಿರುವ ಸಿ.ಪಿ. ಯೋಗೇಶ್ವರ್‌ಗೆ ಅದು ಕೂಡ ಇನ್ನು ಅಧಿಕೃತವಾಗಿಲ್ಲ. ಇತ್ತ ಸಿ.ಪಿ. ಯೋಗೇಶ್ವರ್ ಗೆ ಸದ್ಯ ಬಿಜೆಪಿಯಲ್ಲಿ ಯಾವೊಬ್ಬ ನಾಯಕರು ಕೂಡ ಬೆಂಬಲ ಸೂಚಿಸದೇ ಇರುವುದು, ಪರಿಷತ್ ಸದಸ್ಯರಾಗಲು ಬಿ-ಫಾರಂ ಪಕ್ಷ ಕೊಡುತ್ತಾ ಎಂಬ ಕುತೂಹಲ ಕೆರಳಿಸಿದೆ.
ಒಟ್ಟಾರೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಕೆಡವಿ, ಬಿಜೆಪಿ ಅಧಿಕಾರಕ್ಕೆ ಬರಲು ತೆರೆಮರೆಯಲ್ಲಿ ಶ್ರಮಿಸಿದ್ದ ಸಿ.ಪಿ.ಯೋಗೇಶ್ವರ್ ಅವರ ಪರಿಸ್ಥಿತಿ ಅತಂತ್ರವಾಗಿದ್ದು, ಯೋಗೇಶ್ವರ್ ಬಗ್ಗೆ ಪ್ರಶ್ನೆಗಳು ಹುಟ್ಟಲಾರಂಭಿಸಿದೆ.