ಲಖನೌ : ಔರೇಯಾ ಎಂಬಲ್ಲಿ ಟ್ರಕ್‌ಗಳು ಡಿಕ್ಕಿಯಾಗಿ 24 ವಲಸೆ ಕಾರ್ಮಿಕರು ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ವಲಸೆ ಕಾರ್ಮಿಕರು ಮನೆಗಳಿಗೆ ಮರಳಲು ಸರ್ಕಾರ ವ್ಯವಸ್ಥೆ ಮಾಡಿಕೊಡುತ್ತಿಲ್ಲ ಯಾಕೆ ಎಂಬುದನ್ನು ಈ ಹೃದಯವಿದ್ರಾವಕ ಘಟನೆ ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ. ವಲಸೆ ಕಾರ್ಮಿಕರನ್ನು ರಾಜ್ಯದೊಳಕ್ಕೆ ಕರೆದುಕೊಂಡು ಬರಲು ಬಸ್‌ಗಳು ಯಾಕೆ ಸಂಚರಿಸುತ್ತಿಲ್ಲ. ಸರ್ಕಾರಕ್ಕೆ ಇದ್ಯಾವುದೂ ಕಾಣಿಸುತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ‘ಹೇಳಿಕೆ ನೀಡುವುದಷ್ಟೇ ಸರ್ಕಾರದ ಕೆಲಸವೇ ಎಲ್ಲವನ್ನೂ ನೋಡಿದ ಬಳಿಕವೂ ಅವರು ಸುಮ್ಮನಾಗುತ್ತಾರೆ’ ಎಂದು ಅವರು ಟೀಕಿಸಿದ್ದಾರೆ.
ಇಂದು ಬೆಳಿಗ್ಗೆ ಉತ್ತರ ಪ್ರದೇಶದ ಔರೇಯಾ ಎಂಬಲ್ಲಿ ಟ್ರಕ್‌ಗಳು ಡಿಕ್ಕಿಯಾಗಿ 24 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಯೋಗಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ.