‘ನನ್ನಮ್ಮ ಸೂಪರ್ ಸ್ಟಾರ್’ ಸ್ಪರ್ಧಿ ಸಮನ್ವಿ ಅಪಘಾತದಲ್ಲಿ ಸಾವು : ಕಣ್ಣೀರಿಟ್ಟ ನಟಿ ತಾರಾ
ಬೆಂಗಳೂರು : ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ತಾಯಿ-ಮಗಳು ಕೋಣನಕುಂಟೆಯ ವಾಜರಹಳ್ಳಿ ಬಳಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸಮನ್ವಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಪ್ರಖ್ಯಾತಿ ಪಡೆದಿದ್ದರು.
ಈ ಶೋನಲ್ಲಿ ಜಡ್ಜ್ ಆಗಿದ್ದ ನಟಿ ತಾರಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಕಣ್ಣೀರಿಟ್ಟಿದ್ದಾರೆ.. ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಮೃತಪಟ್ಟಿದ್ದು, ಅಮೃತಾ ನಾಯ್ಡು ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಮನ್ವಿ ನಿಧನದ ಬಗ್ಗೆ ಮಾಧ್ಯಮದವರ ಜೊತೆಗೆ ಮಾತನಾಡಿರುವ ನಟಿ ತಾರಾ, ತೀವ್ರ ”ನಾನು ಬೆಂಗಳೂರಿನಲ್ಲಿರಲಿಲ್ಲ. ಸಂಜೆ ನಂತರ ಒಮ್ಮೆಲೆ ಹಲವರು ಕರೆ ಮಾಡಲು ಆರಂಭಿಸಿದರು. ಕರೆ ಮಾಡಿದವರು ನನಗೆ ಒಮ್ಮೆಲೆ ಸುದ್ದಿ ತಿಳಿಸಲಿಲ್ಲ. ನನ್ನನ್ನು ಈ ಕೆಟ್ಟ ಸುದ್ದಿಗೆ ಸಜ್ಜುಗೊಳಿಸಲು ಯತ್ನಿಸಿದರು ಆಗಲೇ ನನಗೆ ಆತಂಕ ಶುರುವಾಗಿತ್ತು..
ಸಮನ್ವಿ ಇನಿಲ್ಲ ಎಂದರು. ಅಪಘಾತದಲ್ಲಿ ಸಮನ್ವಿ ಹೋಗಿಬಿಟ್ಟಳು ಎಂದರು. ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಏಳು-ಎಂಟು ವಾರ ಆ ಬಾಲಕಿ ನಮ್ಮ ಜೊತೆ ಇದ್ದಳು. ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ 12 ತಾಯಂದಿರು, 12 ಮಕ್ಕಳು ಇದ್ದರು. ನನಗೆ ಎಲ್ಲ ಮಕ್ಕಳೊಂದಿಗೂ ಆಪ್ತತೆ ಪ್ರಾರಂಭವಾಗಿಬಿಟ್ಟಿತ್ತು.ಆ ಶೋನ ಎಲ್ಲರೂ ನನಗೆ ಕುಟುಂಬ ಸದಸ್ಯರಿದ್ದಂತೆ. ಈಗ ಸಮನ್ವಿ ಹೋಗಿರುವುದು ನಮ್ಮ ಕುಟುಂಬ ಸದಸ್ಯೆ ಹೋದಂತೆ ಆಗಿದೆ ಎಂದು ಕಣ್ಣೀರಿಟ್ಟರು.
ಇನ್ನೂ ಕಳೆದ ಎಪಿಸೋಡ್ ನಲ್ಲಷ್ಟೆ ಅಮೃತಾ ನಾಯ್ಡು ಮತ್ತು ಸಮನ್ವಿ ಎಲಿಮಿನೇಟ್ ಆಗಿದ್ದರು. ಅಮೃತಾ ನಾಯ್ಡು ಗರ್ಭಿಣಿ ಆಗಿದ್ದರು. ಅವರಿಂದ ಡ್ಯಾನ್ಸ್ ಎಲ್ಲ ಮಾಡಿಸುವುದು ಸರಿಯಲ್ಲ ಎಂಬುದನ್ನು ಮನಸಿನಲ್ಲಿಟ್ಟುಕೊಂಡು ನಾವು ಈ ನಿರ್ಣಯ ತೆಗೆದುಕೊಂಡೆವು ಎಂದು ತಿಳಿಸಿದರು. ಅಮೃತಾ ನಾಯ್ಡು ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳಾಗಿದ್ದು, 25ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಅಮೃತಾ ನಟಿಸಿದ್ದಾರೆ. ಗಂಗೋತ್ರಿ, ಪುಣ್ಯಕೋಟಿ, ಕುಸುಮಾಂಜಲಿ, ಮನೆಯೊಂದು ಮೂರು ಬಾಗಿಲು, ಅಮೃತ ವರ್ಷಿಣಿ ಧಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅಪಘಾತದಲ್ಲಿ ಮೃತಪಟ್ಟ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಸ್ಪರ್ಧಿ ಸಮನ್ವಿ ಸಾವಿಗೆ ಲಾರಿ ಚಾಲಕನ ಅಜಾಗರೂಚತೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹೀಗಾಗಿ ಲಾರಿ ಚಾಲಕ ಮಂಚೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿ ಬಳಿ ಸ್ಕೂಟರ್ ನಲ್ಲಿ ಅಮೃತಾ ಮತ್ತು ಸಮನ್ವಿ ಒಟ್ಟಿಗೆ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಬೈಕ್ ಗೆ ಗುದ್ದಿದ ಪರಿಣಾಮ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.