ಅನುಚಿತ ವರ್ತನೆ ತೋರಿದವನಿಗೆ ಬೈದ ಮಹಿಳೆಯನ್ನೇ ಕೊಲ್ಲಲು ಯತ್ನಿಸಿದವ ಅರೆಸ್ಟ್
ಲೈಂಗಿಕ ಕಿರುಕುಳ ನೀಡಿದವನಿಗೆ ಬೈದ ಮಹಿಳೆಯ ಕೊಲ್ಲಲು ಹೋದವ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.. ಮಹಿಳೆಯನ್ನು ಒಬ್ಬ ಪುರುಷ ಕೆಟ್ಟದಾಗಿ ಮುಟ್ಟಿದ್ದು, ಅದಕ್ಕೆ ಆಕೆ ಅವನನ್ನ ತರಾಟೆಗೆ ತೆಗೆದುಕೊಂಡು ತೂ ಛೀ ಎಂದಿದ್ದಾರೆ.. ಇದಕ್ಕೆ ಸಿಟ್ಟಾಗಿರುವ ವ್ಯಕ್ತಿ ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಪುಣೆಯ ಗುರುವಾರ್ ಪೇಠ್ ಪ್ರದೇಶದ 38 ವರ್ಷದ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಅನುಚಿತ ರೀತಿಯಲ್ಲಿ ಮುಟ್ಟಿದ್ದಾನೆ. ಇದನ್ನು ಖಂಡಿಸಿ ಮಹಿಳೆ ಆತನನ್ನು ಬೈದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಘಟನೆ ನಡೆದ ಒಂದು ದಿನದ ನಂತರ ಮಹಿಳೆಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ನಂತರ ಆಕೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಕೊಂಡ್ವಾ ಪೊಲೀಸರು ಬಂಧಿಸಿದ್ದಾರೆ.
ಜನವರಿ 11 ರಂದು ಮಹಿಳೆ ಪತಿಯೊಂದಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಳು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿ ಆಕೆಯನ್ನು ಅನುಚಿತ ರೀತಿಯಲ್ಲಿ ಮುಟ್ಟಿದ್ದಾನೆ. ಎಲ್ಲರ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಮಹಿಳೆ ಆತನಿಗೆ ಬೈದಿದ್ದಾಳೆ. ಮರುದಿನ ಮಹಿಳೆ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿರುವಾಗ ಅದೇ ವ್ಯಕ್ತಿ ಅವಳನ್ನು ಹಿಂಬಾಲಿಸಿದ್ದಾನೆ. ನಂತರ ಕೊಂಡ್ವಾ ಪ್ರದೇಶದಲ್ಲಿ ಆರೋಪಿ ಬೈಕ್ನಿಂಡದ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸಿದ್ದಾನೆ. ಏಕೆ ಈ ರೀತಿ ಓಡಿಸುತ್ತಿದ್ದಿರಾ ಎಂದು ಆಕೆಯ ಪತಿ ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆರೋಪಿ, ಮಹಿಳೆಯ ಪತಿಯನ್ನು ಥಳಿಸಿದ್ದಾನೆ. ಇತ್ತ ಕಾರಿನಲ್ಲಿದ್ದ ಮಹಿಳೆಯನ್ನು ಆರೋಪಿ ಕೊಲ್ಲಲು ಯತ್ನಿಸಿದ್ದಾನೆ.
ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಪತಿ ಗಾಯಗೊಂಡಿದ್ದು, ಈ ಕುರಿತು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ದೂರಿನ ಆಧಾರ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.