ಯುಪಿಯಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು | ಪ್ರಿಯಾಂಕಾ ಗಾಂಧಿ ಹೇಳಿದ್ದೇನು..?
ನವದೆಹಲಿ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪ್ರತಿ ಬಾರಿಯಂತೆ ಕುತೂಹಲ ಕೆರಳಿಸಿದೆ. ಅದರಲ್ಲೂ ಈ ಬಾರಿ ಯೋಗಿ ಆದಿತ್ಯನಾಥ್ ನೇತೃತ್ವದ ಆಡಳಿತ ಪಕ್ಷಕ್ಕೆ ಟಾಂಗ್ ಕೊಡಲೇಬೇಕು ಎಂದು ಸಮಾಜವಾದಿ ಪಾರ್ಟಿ ಕಂಕಣಕಟ್ಟಿಕೊಂಡಿದೆ. ಮೇಲ್ನೋಟಕ್ಕೆ ಈ ಬಾರಿ ಎಸ್ ಪಿ ವರ್ಸಸ್ ಬಿಜೆಪಿ ಎಂಬಂತೆ ಗೋಚರವಾಗುತ್ತಿದೆ.
ಈ ಎರಡು ಪಕ್ಷಗಳ ಮಧ್ಯೆ ಕಾಂಗ್ರೆಸ್ ಕೂಡ ಚುನಾವಣೆಯಲ್ಲಿ ಪ್ರಭಾವ ಬೀರಲು ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಅದರಲ್ಲೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಉಸ್ತುವಾರಿಯಾಗಿರುವುದರಿಂದ ಕಾಂಗ್ರೆಸ್ ಪಾಳಯದಲ್ಲಿ ಹೊಸ ಭರವಸೆ ಬೆಳಕು ಮೂಡಿದೆ.
ಆದ್ರೆ ಕಾಂಗ್ರೆಸ್ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಅಥವಾ ರೀತಿಯ ನಾಯಕರನ್ನು ಮುನ್ನಲೆ ತಂದಿಲ್ಲ. ಇದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಈ ಮಧ್ಯೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ ಗಾಂಧಿ, ನನ್ನ ಮುಖ ಕಾಣಿಸುತ್ತಿಲ್ಲವೇ ಎಂದು ಹೇಳಿದ್ದರು. ಈ ಹೇಳಿಕೆಯಿಂದಾಗಿ ಪ್ರಿಯಾಂಕಾ ಅವರೇ ಯುಪಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಯಿತು. ಆದರೆ ತಮ್ಮ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ ನೀಡಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ನಾನು ಎನ್ನುವ ಅರ್ಥದಲ್ಲಿ ನಾನು ಮಾತನಾಡಿಲ್ಲ. ಸಿಎಂ ಅಭ್ಯರ್ಥಿಯಾಗಿ ನನ್ನ ಮುಖ ಕಾಣಿಸುತ್ತಿಲ್ಲವೇ ಎಂಬ ಅರ್ಥದಲ್ಲಿ ನಾನು ಮಾತನಾಡಿಲ್ಲ. ಸಿಎಂ ಅಭ್ಯರ್ಥಿ ಕುರಿತು ಪದೇ ಪದೆ ಪ್ರಶ್ನೆಗಳು ಕೇಳಿ ಬರುತ್ತಿದ್ದರಿಂದ, ಎಲ್ಲೆಡೆ ನನ್ನ ಮುಖವನ್ನು ನೀವು ನೋಡಬಹುದು ಎಂದಷ್ಟೇ ಹೇಳಿದ್ದೆ ಎಂದು ತಿಳಿಸಿದ್ದಾರೆ.









