ಯೆಮನ್ ಮೇಲೆ ಮುಂದುವರೆದ ಸೌದಿ ದಾಳಿ – 77 ಸಾವು
ಯೆಮೆನ್ನಲ್ಲಿ ಹೌತಿ ಬಂಡುಕೋರರ ವಿರುದ್ಧ ಸಮರ ಸಾರಿರುವ ಸೌದಿ ನೇತೃತ್ವದ ಒಕ್ಕೂಟದ ವೈಮಾನಿಕ ದಾಳಿ ನಾಲ್ಕನೇ ದಿನವೂ ಮುಂದುವರಿದಿದೆ. ಈ ದಾಳಿಯಲ್ಲಿ 77 ಮಂದಿ ಸಾವನ್ನಪ್ಪಿದ್ದು, 146 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೌತಿ ಬಂಡುಕೋರರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅವಶೇಷಗಳಡಿ ಸಿಲುಕಿರುವ ಗಾಯಾಳುಗಳಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಸೌದಿ ಒಕ್ಕೂಟದ ಪಡೆಗಳು ಯೆಮೆನ್ನ ಉತ್ತರ ಸಾದಾ ಪ್ರಾಂತ್ಯದ ಮೇಲೆ 59 ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿವೆ. ವಾಯುದಾಳಿಯಲ್ಲಿ ಕಟ್ಟಡ ಸಂಪೂರ್ಣ ಧ್ವಂಸಗೊಂಡಿದೆ.
ಸೌದಿ ಸೇನೆಯು ಕೆಂಪು ಸಮುದ್ರದ ಬಳಿಯ ಹೊಡೆಡಾ ನಗರದ ಮೇಲೂ ಬಾಂಬ್ ದಾಳಿ ಮಾಡಿದೆ. ಈ ದಾಳಿಯಿಂದಾಗಿ ದೇಶದ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಂಡಿದೆ. ಸಮ್ಮಿಶ್ರ ಪಡೆಗಳ ದಾಳಿಯನ್ನು ವಿರೋಧಿಸಿ ನೂರಾರು ಹೌತಿ ಬಂಡುಕೋರರು ಯೆಮೆನ್ ರಾಜಧಾನಿ ಸನಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವೈಮಾನಿಕ ದಾಳಿಯಿಂದಾಗಿ ನಗರದ ರಿಪಬ್ಲಿಕ್ ಆಸ್ಪತ್ರೆಯು ಗಾಯಾಳುಗಳಿಂದ ತುಂಬಿ ತುಳುಕುತ್ತಿದೆ ಎಂದು ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಮಿಷನ್ನ ಮುಖ್ಯಸ್ಥ ಅಹ್ಮದ್ ಮಹತ್ ಹೇಳಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿಯಲ್ಲಿ ಯೆಮೆನ್ನ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 2 ಭಾರತೀಯರು ಇದ್ದರು. ತೈಲ ಕಂಪನಿ ADNOC ಯ ಗೋದಾಮಿನ ಬಳಿ ಇರುವ ಮುಸಾಫಾ ಕೈಗಾರಿಕಾ ಪ್ರದೇಶದಲ್ಲಿ ಇಂಧನ ಟ್ಯಾಂಕರ್ಗಳು ಸ್ಫೋಟಗೊಂಡಿವೆ ಎಂದು ಅಧಿಕಾರಿಗಳು ಎಮಿರೇಟ್ಸ್ ಸುದ್ದಿ ಸಂಸ್ಥೆ (WAM) ಗೆ ತಿಳಿಸಿದ್ದಾರೆ.