ಎರಡನೇ ಬಾರಿ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಿ ಗೆದ್ದ ಪಿ ವಿ ಸಿಂಧು
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೈಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಪಂದ್ಯಾವಳಿಯನ್ನು ಗೆದ್ದಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮಾಳವಿಕಾ ಬನ್ಸೋಡ್ ಅವರನ್ನು ಸೋಲಿಸಿದರು. 35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 21-13, 21-16ರಲ್ಲಿ ಮಾಳವಿಕಾ ಅವರನ್ನು ಸೋಲಿಸಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಪಿವಿ ಸಿಂಧು ಅವರು ಮಾಳವಿಕಾ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸುವ ಮೂಲಕ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಎರಡನೇ ಬಾರಿಗೆ ಮಹಿಳಾ ಸಿಂಗಲ್ಸ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. 26ರ ಹರೆಯದ ಸಿಂಧು ಫೈನಲ್‌ನಲ್ಲಿ ತಮ್ಮ ಅನುಭವವನ್ನು ಸಂಪೂರ್ಣವಾಗಿ ಬಳಸಿಕೊಂಡು ಸುಲಭವಾಗಿ ಮಾಳವಿಕಾ ವಿರುದ್ಧ ಅದ್ಭುತ ಗೆಲುವು ದಾಖಲಿಸಿದರು.
ಸಿಂಧು ಮೊದಲ ಗೇಮ್‌ನಲ್ಲಿ 11-1 ರಿಂದ ಮುನ್ನಡೆ ಸಾಧಿಸಿದ್ದರು, ನಂತರ ಮಾಳವಿಕಾ ಕೆಲವು ಪಾಯಿಂಟ್‌ಗಳನ್ನು ಕಲೆಹಾಕಿ ಪಂದಕ್ಕೆ ಮರಳುವ ಸೂಚನೆ ನೀಡಿದರು. ಆದರೆ ಸಿಂಧು ಪಟ್ಟು ಬಿಡದೆ ಪಾಯಿಂಟ್ ಕಲೆಹಾಕಿ ಮುನ್ನಡೆ ಕಾಯ್ದುಕೊಂಡರು
ಎರಡನೇ ಸುತ್ತಿನಲ್ಲೂ ಮಾಳವಿಕಾ ಅತ್ಯುತ್ತಮ ಪ್ರಯತ್ನ ಮಾಡಿದರೂ ಸಿಂಧು ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ಪಿವಿ ಸಿಂಧು 2017ರಲ್ಲಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 300 ಟೂರ್ನಿಯ ಪ್ರಶಸ್ತಿಯನ್ನೂ ಗೆದ್ದಿದ್ದರು.
ಸಿಂಧುಗೆ ಈ ವರ್ಷ ಚೊಚ್ಚಲ ಪ್ರಶಸ್ತಿ
2022 ರಲ್ಲಿ ಸಿಂಧುಗೆ ಇದು ಮೊದಲ ಪ್ರಶಸ್ತಿಯಾಗಿದೆ. ಸೈಯದ್ ಮೋದಿ ಟೂರ್ನಮೆಂಟ್‌ಗೂ ಮುನ್ನ ಅವರು ಇಂಡಿಯಾ ಓಪನ್‌ನ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಸುಪಾನಿಡಾ ಕಟೆಥಾಂಗ್ ವಿರುದ್ಧ ಸೋತಿದ್ದರು. ಸುಪಾನಿದಾ 14-21, 21-13, 10-21ರಲ್ಲಿ ಸಿಂಧು ಅವರನ್ನು ಸೋಲಿಸಿದರು.








