ಜಗತ್ತಿನ ಹಿರಿಯಣ್ಣ ಅಮೇರಿಕಾದ ನೆಲದಲ್ಲಿದೆ ಆ ಒಂಟಿ ಮಹಿಳೆ ವಾಸವಿರುವ ಒಂಟಿ ಗ್ರಾಮ. ಯಾವುದೇ ಜನವಸತಿ ಇಲ್ಲದ ಆ ಪುಟ್ಟ ಗ್ರಾಮದ ಏಕೈಕ ಪ್ರಜೆ 80 ದಾಟಿದ ವೃದ್ಧ ಮಹಿಳೆ ಒಬ್ಬಳೇ. ನಾಗರೀಕ ಸಮಾಜದಿಂದ ದೂರವಿದ್ದರೂ ಹೋಟೆಲ್ ನಡೆಸುತ್ತಾ ಬದುಕು ಸವೆಸುವ ಗಟ್ಟಿಗಿತ್ತಿ ಅವಳು. ಜಗತ್ತಿನ ಖ್ಯಾತ ಮಾಧ್ಯಮಗಳಾದ ಬಿಬಿಸಿ, ಗಾರ್ಡಿಯನ್, ಟೆಲಿಗ್ರಾಫ್, ವಾಷಿಂಗ್ ಟನ್ ಪೋಸ್ಟ್ ಸೇರಿದಂತೆ ಹಲವು ಜಾಗತಿಕ ಮಾಧ್ಯಮಗಳು ಆಕೆಯ ಬದುಕಿನ ಹೋರಾಟವನ್ನ ವರದಿ ಮಾಡಿವೆ. ಲಾಕ್ ಡೌನ್ ಕಾಲದಲ್ಲಿ ಮನೆಯಲ್ಲೇ ಬಂದಿಯಾದ ನಮಗೆ ಅವಳ ಬದುಕು ಸಾಮಾಜಿಕ ಅಂತರದ ಜೀವನಕ್ಕೊಂದು ಪಾಠ.
ಅಂತದ್ದೊಂದು ನಿರ್ಜನ ಗ್ರಾಮ ಜಗತ್ತಿನ ಬೇರೆ ಯಾವುದೇ ಭಾಗದಲ್ಲಿದ್ರೂ ಇಷ್ಟೊಂದು ಕುತೂಹಲ ಹುಟ್ಟಿಸ್ತಿರಲಿಲ್ಲ. ಅಸಲಿಗೆ ಭಾರತದಲ್ಲಿ ಅಂತ ಹತ್ತಾರು ಜನವಸತಿ ಖಾಲಿ ಬಿದ್ದ ಹಳ್ಳಿಗಳಿವೆ. ಅಭಿವೃದ್ಧಿ ಹೊಂದುತ್ತಿರುವ ಅನೇಕ ರಾಷ್ಟ್ರಗಳಲ್ಲಿ ಇದು ಸರ್ವೇ ಸಾಮಾನ್ಯ ಸುದ್ದಿ. ಆದ್ರೆ ಈ ಒಂಟಿ ಗ್ರಾಮ ಹಾಗೂ ಅಲ್ಲಿನ ಏಕೈಕ ಪ್ರಜೆಯ ವಾಸ ಜಗತ್ತಿನ ಪ್ರಭಾವಿ ಮಾಧ್ಯಮಗಳ ಗಮನ ಸೆಳೆಯಲು ಕಾರಣವಿದೆ. ವಿಶ್ವದ ಅಗ್ರಜ ಎಂದೇ ಕರೆಸಿಕೊಳ್ಳುವ ಅಮೇರಿಕಾ ಖಂಡದಲ್ಲಿದೆ ಆ ವಿಚಿತ್ರ, ವಿಸ್ಮಯಕಾರಿ ಹಾಗೂ ಕುತೂಹಲಕಾರಿ ಹಳ್ಳಿ. ಅದು ಒಂಟಿ ಮಹಿಳೆ ವಾಸವಿರುವ ಒಂದೇ ಮನೆಯ ಗ್ರಾಮ.
ನಮ್ಮ ಮಲೆನಾಡು ಭಾಗದಲ್ಲಿ ದಟ್ಟಅಡವಿಯ ಮದ್ಯೆ ಒಂಟಿ ಗ್ರಾಮಗಳು ಈಗಲೂ ಕಾಣಸಿಗುತ್ತವೆ. ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಗೋಪಾಲಯ್ಯನ ಪಾತ್ರ ಅರಣ್ಯದ ಮಧ್ಯೆ ಒಂಟಿ ಗ್ರಾಮ ಪರಿಕಲ್ಪನೆಯನ್ನು ರಸವತ್ತಾಗಿ ಅನಾವರಣಗೊಳಿಸಲಾಗಿದೆ. ಗ್ರಾಮಗಳ ರಾಷ್ಟ್ರ ಭಾರತದಲ್ಲಿ ಈಗಲೂ ಅಲ್ಲಲ್ಲಿ ಅಭಯಾರಣ್ಯಗಳ ಮಧ್ಯೆ, ಬಯಲುಸೀಮೆಯ ನಡುವೆ, ಮರುಳುಗಾಡಿನ ಅಲ್ಲಲ್ಲಿ ಒಂಟಿ ಗ್ರಾಮಗಳ ಅಸ್ಥಿತ್ವವಿದೆ. ಆದ್ರೆ ವಿಶ್ವದ ಬಲಾಢ್ಯ ರಾಷ್ಟ್ರ ಹಿರಿಯಣ್ಣ ಅಮೇರಿಕಾದ ನಾಡಿನಲ್ಲಿ ಊರಿಗೊಂದು ಒಂಟಿ ಮನೆ ಹಾಗೂ ಅಲ್ಲಿ ಬದುಕುವ ಒಂಟಿ ಜೀವ ಅನ್ನುವ ಸಂಗತಿಯನ್ನು ಕಲ್ಪಿಸಿಕೊಳ್ಳಲಾಗತ್ತಾ? ಕುತೂಹಲ ಅಚ್ಚರಿ ಹುಟ್ಟಿಸಿದ್ರೂ ಇದು ಸತ್ಯ.
ಯುನೈಟೆಡ್ ಸ್ಟೇಟ್ಸ್ನ ನಿಬರಸ್ಕಾ ಸ್ಟೇಟ್ನ ಬಾಯ್ಡ್ ವ್ಯಾಪ್ತಿಗೆ ಸೇರುವ ಮೊನೋವಿ ಒಂದು ಪುಟ್ಟ ಗ್ರಾಮ. ನಿಮಗೆ ಆಶ್ವರ್ಯವಾದ್ರೂ ಇದು ಸತ್ಯ; ಈ ಗ್ರಾಮದ ಜನಸಂಖ್ಯೆ ಕೇವಲ 1. ಮೊನೋವಿ ಅನ್ನುವ ಅಚ್ಚರಿಯ ಪುಟ್ಟ ಗ್ರಾಮ ನಿಯೋಬ್ರರಾ ಹಾಗೂ ಮಿಸ್ಸೋರಿ ನದಿಗಳ ಮಧ್ಯೆ ಇದೆ. ಈ ಊರಿನ ಒಟ್ಟು ವಿಸ್ತೀರ್ಣ 0.21 ಚದರ ಮೈಲಿ. ಮೊನೋವಿಗೆ ಹತ್ತಿರದಲ್ಲಿರುವ ಸೂಪರ್ ಬಜಾರ್ ಸುಮಾರು 60 ಮೈಲಿ ದೂರವಿದೆ.
ಅಮೇರಿಕಾದ ಸ್ಥಳೀಯ ಭಾಷೆಯಲ್ಲಿ ಮೊನೋವಿ ಅಂದ್ರೆ ಹೂವು ಎನ್ನುವ ಅರ್ಥ. ಹಿಂದೊಂದು ಕಾಲದಲ್ಲಿ ಈ ಪ್ರದೇಶದಲ್ಲಿ ಯಥೇಚ್ಛವಾಗಿ ಕಾಡುಪುಷ್ಪಗಳು ಬೆಳೆಯುತ್ತಿದ್ದವಂತೆ. ಮೊನೋವಿ ಸೃಷ್ಟಿಯಾಗಿದ್ದು 1902ರಲ್ಲ. ಫ್ರೀಮಾಂಟ್, ಎಲ್ಖೋರ್ನ್ ಹಾಗೂ ಮಿಸ್ಸೋರಿ ರೈಲು ಮಾರ್ಗವನ್ನು ಮೊನೋವಿಗೆ ಸ್ಪರ್ಷಿಸುವಂತೆ ವಿಸ್ತರಿಸಲಾಗಿತ್ತು. ಅದೇ ವರ್ಷ ಇಲ್ಲೊಂದು ಅಂಚೇ ಕಚೇರಿ ಸಹ ತೆರೆಯಲಾಗಿತ್ತು ಆದರೆ 1967ರಲ್ಲಿ ಅದರ ಕಾರ್ಯಾಚರಣೆ ಸ್ಥಗಿತಗೊಂಡಿತು. ಹಿಂದೊಮ್ಮೆ ಇಲ್ಲೊಂದು ಸಣ್ಣ ಟೌನ್ ಶಿಪ್ ಇತ್ತೆಂಬುದಕ್ಕೆ ಪುರಾವೆ ಎಂಬಂತೆ ಮೊನೋವಿಯಲ್ಲಿ ಅಲ್ಲಲ್ಲಿ ಪಾಳುಬಿದ್ದ ಮರದ ಕಟ್ಟಡಗಳು ಕಾಣಿಸುತ್ತವೆ.
1930ರ ವೇಳೆಯಲ್ಲಿ ಈ ಮೊನೋವಿಯಲ್ಲಿ ಸುಮಾರು 150ರಷ್ಟು ಜನಸಂಖ್ಯೆ ಇತ್ತು. ಉಳಿದ ಸಣ್ಣ ಪುಟ್ಟ ಹಳ್ಳಿಗಳಂತೆ ಇಲ್ಲಿಯೂ ಯುವಕರು ಉದ್ಯೋಗ ಹಾಗೂ ಉತ್ತಮ ಗುಣಮಟ್ಟದ ಜೀವನ ಅರಸಿ ಪಟ್ಟಣಗಳಿಗೆ ತೆರಳಿದ್ರು. ಕ್ರಮೇಣ ಮೊನೋವಿ ಸೊರಗತೊಡಗಿತು. ಸ್ವತಃ ಏಯ್ಲರ್ ಮತ್ತು ರೂಡಿ ದಂಪತಿಗಳ ಮಗ ಹಾಗೂ ಮಗಳೇ ಪಟ್ಟಣದ ಕಡೆ ಮುಖ ಮಾಡಿದ್ರು. 1980ರಲ್ಲಿ ಜನಸಂಖ್ಯೆ 18 ಕ್ಕೆ ಕುಸಿಯಿತು. 2000ನೇ ಜನಗಣತಿಯ ವೇಳೆಗಾಗಲೆ ಇಲ್ಲಿನ ಜನಸಂಖ್ಯೆ 2ಕ್ಕೆ ಸ್ಥಗಿತಗೊಂಡಿತ್ತು. ಅಲ್ಲಿದ್ದ ಇಬ್ಬರೇ ವ್ಯಕ್ತಿಗಳು ರೂಡಿ ಹಾಗೂ ಎಲ್ಸೀ ಏಯ್ಲರ್ ದಂಪತಿಗಳು. 2004ರಲ್ಲಿ ಪತಿ ರೂಡಿಯ ಮರಣದ ನಂತರ ಏಯ್ಲರ್ ಏಕಾಂಗಿಯಾಗಿ ಇಲ್ಲಿ ವಾಸಿಸುತ್ತಿದ್ದಾರೆ.
ಏಯ್ಲರ್, ಈ ಮೊನೋವಿಯ ಏಕೈಕ ಪ್ರಜೆ, ಗ್ರಾಮ ಮುಖ್ಯಸ್ಥೆ ಹಾಗೂ ಮೊನೋವಿಯ ಆಡಳಿತಾಧಿಕಾರಿ ಎಲ್ಲವೂ ಹೌದು; ಹಾಗೆ ಪ್ರಾಯಶಃ ಈಕೆಯೇ ಈ ಊರಿನ ಕಟ್ಟಕಡೆಯ ಪ್ರಜೆಯೂ ಹೌದೇನೋ. ಏಯ್ಲರ್ ತಾನೇ ಖುದ್ದಾಗಿ ತನ್ನ ಹೋಟೆಲ್ ಗಾಗಿ ಮದ್ಯ ಮಾರಾಟದ ಪರವಾನಗಿ ಪಡೆದುಕೊಂಡಿದ್ದಾಳೆ. ಒಂದು ಪಟ್ಟಣದ ಮೇಯರ್ನಂತೆ ಅಮೇರಿಕಾ ಸಂಯಕ್ತ ಸಂಸ್ಥಾನದ ಆಡಳಿತಕ್ಕೆ ಪತ್ರ ಬರೆದು ತನ್ನ ಊರಿನ ರಸ್ತೆಯನ್ನು ಪ್ರತೀ ವರ್ಷ ರಿಪೇರಿ ಮಾಡಿಸಿಕೊಳ್ಳುತ್ತಾಳೆ. ಪುರಸಭೆಯ ಅನುಧಾನದಲ್ಲಿ ತನ್ನೂರಿನ ಸ್ಟ್ರೀಟ್ ಲೈಟ್ಗಳನ್ನು ನಿರ್ವಹಿಸುತ್ತಾಳೆ. ಏಯ್ಲರ್ ಒಬ್ಬಳಿಗಾಗಿ ಆ ಊರಿನ ಮೂಲಸೌಕರ್ಯಕ್ಕೆ ಅಮೇರಿಕಾದ ಮುನ್ಸಿಪಲ್ ಆಡಳಿತ ಸ್ಟೇಟ್ ಫಂಡಿಂಗ್ ಅನುದಾನ ಬಿಡುಗಡೆ ಮಾಡುತ್ತದೆ ಕೂಡಾ. ಏಯ್ಲರ್ ಸರ್ಕಾರಕ್ಕೆ ತಪ್ಪದೇ ಪ್ರತೀ ವರ್ಷ ತೆರಿಗೆ ಕಟ್ಟುತ್ತಾಳೆ. ತನ್ನೋರಿನ ರಸ್ತೆಗಳಿಗೆ, ಕುಡಿಯುವ ನೀರಿಗೆ ಹಾಗೂ ಬೀದಿ ದೀಪಕ್ಕೆ ಸೇರಿದಂತೆ ಆ ಊರಿನ ಮೂಲಸೌಕರ್ಯಕ್ಕೆ ಏಯ್ಲರ್ ವಾರ್ಷಿಕ 500 ಡಾಲರ್ ತೆರಿಗೆ ಪಾವತಿಸುತ್ತಾಳೆ.
ರೂಡಿ-ಏಯ್ಲರ್ ಸ್ಮರಣಾರ್ಥ ಇಲ್ಲೊಂದು ಸುಸಜ್ಜಿತ ಗ್ರಂಥಾಲಯವೂ ಇದೆ. ಏಯ್ಲರ್, ತನ್ನ ಪತಿ ಆಸಕ್ತಿಯಿಂದ ಸಂಗ್ರಹಿಸಿದ ಸುಮಾರು 5 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಅತ್ಯಂತ ಜತನದಿಂದ ಜೋಪಾನ ಮಾಡಿದ್ದಾಳೆ. ಜೊತೆಗೆ ಏಯ್ಲರ್ ತನ್ನ ಬದುಕಿನ ನಿರ್ವಹಣೆಗಾಗಿ ಇಲ್ಲೊಂದು ಹೋಟೆಲ್ ಹಾಗೂ ವಸತಿಗೃಹವನ್ನೂ ತೆರೆದಿದ್ದಾಳೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗಳು ಏಯ್ಲರ್ ಹೋಟೆಲ್ನಲ್ಲಿ ಕೊಂಚ ವೇಳೆ ತಂಗಿ, ಊಟ ಉಪಹಾರ ಸೇವಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ.
80 ವರ್ಷ ದಾಟಿರುವ ಏಯ್ಲರ್, ಮೊನೋವಿಯ ಮೂರು ಜೀವಂತ ಮನೆಗಳಲ್ಲಿ ಒಂದರಲ್ಲಿ ವಾಸಿಸುತ್ತಿದ್ದಾಳೆ. ಇನ್ನೊಂದು ಆಕೆಯ ಹೋಟೆಲ್ ಆಗಿದ್ರೆ, ಮತ್ತೊಂದು ಮನೆಯಲ್ಲಿ ಅವಳ ಪತಿಯ ವಿಶಾಲ ಹಾಗೂ ವ್ಯವಸ್ಥಿತ ಲೈಬ್ರರಿ ಇದೆ. ಏಯ್ಲರ್ ಮೊನೋವಿಯ ಹೋಟೆಲ್ ಮಾಲೀಕಳೂ ಹೌದು, ಪರಿಚಾರಕಿಯೂ ಹೌದು ಹಾಗೂ ಅಡುಗೆಯವಳೂ ಹೌದು. ಅಷ್ಟೆ ಅಲ್ಲ ಮೊನೋವಿಯ ಏಕೈಕ ನಾಗರೀಕಾಗಿರುವ ಏಯ್ಲರ್ ತನ್ನ ಗ್ರಂಥಾಲಯದ ಲೈಬ್ರರಿಯನ್ ಹಾಗೂ ಬಹುತೇಕ ಸಂದರ್ಭದಲ್ಲಿ ಲೈಬ್ರರಿಯ ಏಕೈಕ ಓದುಗಳೂ ಹೌದು.
ಒಂಟಿಗ್ರಾಮದ ಒಂಟಿ ಮಹಿಳೆ ಅನ್ನುವ ಕುತೂಹಲಕ್ಕೆ ಮೊನೋವಿ ಹಾಗೂ ಏಯ್ಲರ್ ಹೋಟೆಲ್ ಮತ್ತು ಲೈಬ್ರರಿಗೆ ಬೇಟಿ ಕೊಡುವವರ ಸಂಖ್ಯೆಯೇನು ಕಡಿಮೆ ಇಲ್ಲ. ಒಮಾಹಾದಲ್ಲಿ ಓದಲು ಬಂದಿರುವ ಬೇರೆ ರಾಷ್ಟ್ರಗಳ ವಿದ್ಯಾರ್ಥಿಗಳ ಮೋಟರ್ ಸೈಕಲ್ ಗ್ರೂಪ್ ವರ್ಷದಲ್ಲಿ ಅನೇಕ ಬಾರಿ ಇಲ್ಲಿಗೆ ವಿಸಿಟ್ ಮಾಡುವುದಿದೆ. 40 ಬೇರೆ ಬೇರೆ ರಾಷ್ಟ್ರಗಳು, 47 ಬೇರೆ ಬೇರೆ ಪ್ರಾಂತ್ಯಗಳ ಪ್ರವಾಸಿಗಳು ಹಾಗೂ ಸಂದರ್ಶಕರು ಏಯ್ಲರ್ಳನ್ನು ನೋಡಲು ಮೊನೋವಿಗೆ ಭೇಟಿ ಕೊಟ್ಟು ಆಕೆಯ ಉಪಚಾರ ಸ್ವೀಕರಿಸಿದ್ದಾರೆ. ಪ್ರಪಂಚದ ಪ್ರಮುಖ ಸುದ್ದಿ ಮಾಧ್ಯಮಗಳಾದ ಬಿಬಿಸಿ, ಸಿಎನ್ಎನ್, ಅಲ್ಜಜೀರಾ, ಡೈಲಿ ಮೇಲ್, ವಾಷಿಂಗ್ಟನ್ ಪೋಸ್ಟ್, ಗಾರ್ಡಿಯನ್ ಸಂಸ್ಥೆಗಳ ಪತ್ರಕರ್ತರು ಏಯ್ಲರ್ಳನ್ನು ಸಂದರ್ಶಿಸಿ ವಿಶೇಷ ವರದಿ ಮಾಡಿದ್ದಾರೆ.
ಏಯ್ಲರ್ ತಾಯಿ ನಿಬರಸ್ಕಾದ ಮೂಲನಿವಾಸಿ ಹಾಗೂ ಆಕೆಯ ತಂದೆ ಜರ್ಮಿನಿಯಿಂದ ವಲಸೆ ಬಂದವ. 19ನೇಯ ಪ್ರಾಯದಲ್ಲಿ ರೂಡಿಯನ್ನು ಮದುವೆಯಾದ ಏಯ್ಲರ್ ಮೊದಲು ಒಮಾಹದಲ್ಲಿ ವಾಸವಿದ್ರು ಆ ಬಳಿಕ ಮೊನೋವಿಗೆ ಸ್ಥಳಾಂತರಗೊಂಡ್ರು. 1975ರಲ್ಲಿ ಮೊನೋವಿಯಲ್ಲಿ ತಮ್ಮ ಸ್ವಂತ ರೆಸ್ಟೋರೆಂಟ್ ಆರಂಭಿಸಿದ್ರು. ಸಿಯೋಕ್ಸ್ ಪಟ್ಟಣದಲ್ಲಿ ಏಯ್ಲರ್ನ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳು ವಾಸವಿದ್ದಾರೆ. ಆದ್ರೆ ಮೊನೋವಿ ಗ್ರಾಮವನ್ನು ತೊರೆಯಲು ಒಪ್ಪದ ವೃದ್ಧ ಜೀವ ಏಯ್ಲರ್ ಈಗಲೂ ಏಕಾಂಗಿಯಾಗಿ ಹಳೆಯ ನೆನಪುಗಳ ಸಂಗಡ ಬದುಕುತ್ತಿದ್ದಾಳೆ.
80 ದಾಟಿದ ಈ ಇಳಿವಯಸ್ಸಿನಲ್ಲೂ ಒಂಟಿಯಾಗಿ ಬದುಕುತ್ತಿರುವ ಏಯ್ಲರ್, ಸ್ವಾಭಿಮಾನಿ, ಸ್ವಾವಲಂಭಿ ಮತ್ತು ಯಾರ ಹಂಗೂ ಇಲ್ಲದೇ ಬದುಕುತ್ತಿದ್ದಾಳೆ. ಮೊನೋವಿ ಹಾಗೂ ಏಯ್ಲರ್ನ ಹೋರಾಟದ ಬದುಕಿನ ಜೊತೆ, ಏಯ್ಲರ್ನ ಧೈರ್ಯ ಹಾಗೂ ಆತ್ಮಗೌರವ ಬದುಕು ಸಹ ಶ್ಲಾಘನೀಯ. ಸಂಘ ಜೀವಿಯಾದ ಮನುಷ್ಯ ಒಂಟಿ ಒಂಟಿಯಾಗಿರುವುದು ಬೋರೋ ಬೋರು ಎಂದು ಹಲುಬುತ್ತಿದ್ದ. ಕರೋನಾ ಸಾಂಕ್ರಾಮಿಕ ಪಿಡುಗು ಕಾಲಿಟ್ಟ ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಧ್ಯವಾದಷ್ಟು ಒಂಟಿಯಾಗಿ ಬದುಕಿರಿ ಎನ್ನುತ್ತಿದೆ ವಿಜ್ಞಾನ ಲೋಕ ಮತ್ತು ಸರ್ಕಾರ. ಒಂಟಿಯಾಗ ಬದುಕಲು ಕಷ್ಟ ಅನ್ನುವವರೆಲ್ಲಾ ಮನೋವಿಯ ಏಯ್ಲರ್ ಬದುಕನ್ನು ಓದಿಕೊಳ್ಳಬೇಕು.
-ವಿಭಾ (ವಿಶ್ವಾಸ್ ಭಾರದ್ವಾಜ್)








