ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ವಿವಿಧ ಕ್ಷೇತ್ರದ 34 ಗಣ್ಯರು ಬಹಿರಂಗ ಪತ್ರವನ್ನ ಬರೆದಿದ್ದಾರೆ.Letter of 34 dignitaries to CM Basavaraj Bommai …
ಕರ್ನಾಟಕದಲ್ಲಿ ದ್ವೇಷ ಭಾಷಣಗಳು ಹೆಚ್ಚುತ್ತಿವೆ. ಧಾರ್ಮಿಕ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳ ಮೇಲೆ ಸಾರ್ವಜನಿಕ ಬೆದರಿಕೆ ಮತ್ತು ದಾಳಿಗಳು ನಡೆದಿವೆ. ಮಾನಗೇಡಿ ಹತ್ಯೆಗಳು, ಅನೈತಿಕ ಪೋಲೀಸ್ ಗಿರಿ, ಮಹಿಳೆಯರ ಮೇಲೆ ಶಾಸಕರೇ ಅವಮಾನಕಾರಿ ಹೇಳಿಕೆ ನೀಡುವಂಥಹ ವಿದ್ಯಾಮಾನಗಳು ನಡೆಯುತ್ತಿವೆ ಎಂದು ಪ್ರಗತಿಪರ ಕವಿ ವಿಜ್ಞಾನಿ ಸಾಮಾಜಿಕ ಕಾರ್ಯಕರ್ತರು ಪತ್ರ ಬರೆದಿದ್ದಾರೆ.
ಭೂ-ಭೌತಶಾಸ್ತ್ರಜ್ಞ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮಾಜಿ ಕಾರ್ಯದರ್ಶಿ ಪ್ರೊ. ವಿನೋದ್ ಗೌರ್, ವಕೀಲರು ಮತ್ತು ಲೇಖಕರಾದ ಫ್ಲಾವಿಯಾ ಆಗ್ನೆಸ್, ಇತಿಹಾಸಕಾರರಾದ ಪ್ರೊ. ಜಾನಕಿ ನಾಯರ್, ಇತಿಹಾಸಕಾರ ಡಾ. ರಾಮಚಂದ್ರ ಗುಹಾ, ಪರಸರವಾದಿ ನಾಗೇಶ್ ಹೆಗಡೆ ಮುಂತಾದ ಪ್ರಗತಿಪರರು ಸಿ ಎಂ ಗೆ ಬೆರದ ಪತ್ರಕ್ಕೆ ಸಹಿ ಹಾಕಿದ್ದಾರೆ.
ಈ ರೀತಿಯ ಘಟನೆಗಳು ಪ್ರಗತಿಪರ ರಾಜ್ಯವೆಂಬ ಕರ್ನಾಟಕದ ಸುದೀರ್ಘ ಚರಿತ್ರೆಗೇ ಕಳಂಕವಾಗಿದೆ. ಕರ್ನಾಟಕವು ಬಹುತ್ವದ ಸಮಾಜವೊಂದರ ಸೌಹಾರ್ದಯುತ ಬಾಳ್ವೆಗೆ ನೀರೆರೆದ ರಾಜ್ಯ. ಎಲ್ಲಾ ವರ್ಗಗಳ ಅಭ್ಯುದಯಕ್ಕೆ ಮಾದರಿ ಕಲ್ಯಾಣ ಕಾರ್ಯಕ್ರಮಗಳನ್ನೂ ಆರಂಭಿಸಿದ ರಾಜ್ಯ. ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ, ಶೀಶುನಾಳ ಶರೀಫ ಮುಂತಾದವರೇ ನಮ್ಮ ನಾಯಕರು. ಬೇಂದ್ರೆ, ಕುವೆಂಪು ಸಹಿತ ನಮ್ಮ ಸಾಹಿತಿಗಳು ಬಹು ಸಂಸ್ಕೃತಿಯ ಚಹರೆಗಳನ್ನೇ ಆಧಾರವಾಗಿಟ್ಟುಕೊಂಡ ಕರ್ನಾಟಕತ್ವವನ್ನು ಸಂಭ್ರಮಿಸಿದವರು. ಈ ಸಹಿಷ್ಣುತೆ ಮತ್ತು ಹಂಚಿಕೊಂಡ ಸಹಬಾಳ್ವೆಯ ಪರಂಪರೆ ಈಗ ಛಿದ್ರವಾಗುತ್ತಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಆರ್ಥಿಕ, ಆಡಳಿತಾತ್ಮಕ ಮತ್ತು ರಾಜಕೀಯ ಆಯಾಮಗಳಲ್ಲಿ ಕರ್ನಾಟಕವು ತನ್ನ ಒಕ್ಕೂಟ ಭಾಗಿದಾರಿಯ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗಿನ ದಮನಕಾರಿ ಗೋ ಸಂರಕ್ಷಣಾ ಕಾಯಿದೆ ಮತ್ತು ಮತಾಂತರ ನಿಷೇಧ ಕಾಯಿದೆಗಳು ಧಾರ್ಮಿಕ ಅಲ್ಪಸಂಖ್ಯಾತರ ಆರ್ಥಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ದಮನಿಸುವ ಕಾಯಿದೆಗಳಾಗಿವೆ. ಈ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಹೂಡಿಕೆ, ಮತ್ತು ಉದ್ಯಮಗಳ ತಾಣವಾಗಿ ಕರ್ನಾಟಕಕ್ಕಿರುವ ಖ್ಯಾತಿಯೂ ಕೆಡುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಸಂಕುಚಿತ ಕೋಮು ಹಿತಾಸಕ್ತಿಯ ಅಜೆಂಡಾಗಳನ್ನು, ಯಾರಿಂದಲೋ ಪಡೆದ ಸಲಹೆಗಳನ್ನು ಅನುಷ್ಠಾನಗೊಳಿಸುವುದು ರಾಜ್ಯದ ಮತ್ತು ರಾಜ್ಯದ ಪ್ರಜೆಗಳ ಹಿತಾಸಕ್ತಿಗೆ ಮಾರಕ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.