ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣಾ ಬಿಡುಗಡೆ ದಿನಾಂಕ ಮುಂದೂಡಿಕೆ..
ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪಕ್ಕದ ರಾಜ್ಯಗಳಲ್ಲೂ ಭಾರಿ ನಿರೀಕ್ಷೆ ಹುಟ್ಟಿಸಿರುವ ಕಿಚ್ಚ ಸುದೀಪ್ ಅಭಿನಯದ ಸಿನಿಮಾ ವಿಕ್ರಾಂತ್ ರೋಣ ಚಿತ್ರವನ್ನ ಮತ್ತೆ ಮುಂದೂಡಲಾಗಿದೆ. ಕೊರೋನಾ ಮತ್ತು ಓಮಿಕ್ರಾನ್ ಪ್ರಕರಣಗಳ ಹೆಚ್ಚಳದಿಂದ ಸಿನಿಮಾ ರಿಲೀಸ್ ಡೇಟ್ ಮುಂದೂಡುವುದಾಗಿ ಚಿತ್ರತಂಡ ಹೇಳಿದೆ.
‘ನಮ್ಮ ಕನಸು ಫೆಬ್ರವರಿ 24ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದರೂ, ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳು, ಪ್ರಪಂಚದಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲು ಅನುಕೂಲಕರವಾಗಿಲ್ಲ.
ನಿಮ್ಮ ಪ್ರೀತಿ ಹಾಗೂ ತಾಳ್ಮೆಗೆ ನಾವು ಆಭಾರಿ. ಅದಕ್ಕೆ ಪ್ರತಿಯಾಗಿ, ನೀವು ಮನಸಾರೆ ಸ್ವೀಕರಿಸುವಂತಹ ಚಿತ್ರ ನಿಮ್ಮ ಮುಂದೆ ತರುತ್ತೇವೆ ಎಂಬ ಭರವಸೆ ನಮಗಿದೆ. ಭಾರತದ ಮೊದಲ ಅಡ್ವೆಂಚರ್ ಹೀರೋನನ್ನು ಪ್ರಪಂಚಕ್ಕೆ ಪರಿಚಯಿಸುವ ಹೊಸ ದಿನಾಂಕವನ್ನು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ ಎಂದು ಚಿತ್ರ ತಂಡ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದೆ.
ಜ್ಯಾಕ್ ಮಂಜು ನಿರ್ಮಾಣದ ಚಿತ್ರಕ್ಕೆ ರಂಗಿತರಂಗ ಖ್ಯಾತಿಯ ಅನೂಪ್ ಬಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. ಫೆಬ್ರವರಿ 24 ರಂದು ಚಿತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗಬೇಕಿತ್ತು. ಕರೋನಾ ಕಾರಣದಿಂದಾಗಿ ಸಿನಿಮಾ ಉದ್ಯಮ ಮತ್ತೊಮ್ಮೆ ಆತಂಕಕ್ಕೆ ಒಳಗಾಗಿವೆ.
ವಿಕ್ರಾಂತ್ ರೋಣಾ ಚಿತ್ರಕ್ಕೆ ಬಾರಿ ಮೊತ್ತದ ಒಟಿಟಿ ಆಫರ್ ಬಂದರೂ ಸಹಿತ ಚಿತ್ರ ತಂಡ ಒಪ್ಪದೇ ಥಿಯೇಟರ್ ಗಳಲ್ಲಿಯೇ ಚಿತ್ರ ರಿಲೀಸ್ ಮಾಡಲು ಮುಂದಾಗಿದೆ. ಚಿತ್ರದಲ್ಲಿ ನಿರೂಪ್ ಬಂಡಾರಿ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಸಹ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.