ಜಗತ್ತನೇ ತಲ್ಲಣಗೊಳಿಸಿರುವ ಕೊರೊನಾ ನಿಯಂತ್ರಣಕ್ಕೆ ಸದ್ಯ ಲಾಕ್ ಡೌನ್ ಒಂದೇ ಆಯುಧವಾಗಿದೆ. ಹೀಗಾಗಿಯೇ ಕೊರೊನಾ ಪೀಡಿತ ದೇಶಗಳು ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿವೆ. ಅಲ್ಲದೆ ಎಲ್ಲರೂ ಕಂಪಲ್ಸರಿ ಮಾಸ್ಕ್ ಧರಿಸಲೇಬೇಕೆಂದು ಸರ್ಕಾರಗಳು ಮನವಿ ಮಾಡಿಕೊಳ್ಳುತ್ತಲೇ ಇವೆ.
ಭಾರತದಲ್ಲಂತೂ ಮಾಸ್ಕ್ ಧರಿಸುವ ಬಗ್ಗೆ ಸರ್ಕಾರಗಳು ಪ್ರೀತಿಯಿಂದ, ಕಾನೂನಿನಿಂದ, ಶೈಕ್ಷಣಿಕವಾಗಿ, ಸೆಲೆಬ್ರಿಟಿಗಳ ಮುಖಾಂತರ ಹೇಳಿಸುತ್ತಿವೆ. ಆದ್ರೆ ನಮ್ಮಲ್ಲಿ ಕೇಳುವ ಮನಸ್ಥಿತಿಗಳು ಕಡಿಮೆಯೇ.
ಇದರ ಮಧ್ಯೆ ಕತಾರ್ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಕಳೆದ ವಾರದಿಂದಲೇ ಮಾಸ್ಕ್ ಕಡ್ಡಾಯ ಎಂದು ಕಾನೂನು ತರಲಾಗಿದೆ. ಇನೊಬ್ಬರ ಮುಂದೆ ಮಾತನಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಮತ್ತು ಕಾರಿನಲ್ಲಿ ಸಹಪ್ರಯಾಣಿಕರೊಂದಿಗೆ ಪ್ರಯಾಣಿಸುವಾಗ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಹಾಗೊಂದು ವೇಳೆ, ಮಾಸ್ಕ್ ಧರಿಸದೇ ಸಬೂಬು ಹೇಳಿದರೆ, ಕನಿಷ್ಠ ಮೂರು ವರ್ಷ ಜೈಲುವಾಸ ಅನುಭವಿಸಬೇಕಾಗುತ್ತದೆ. ಅಷ್ಟೆಅಲ್ಲದೆ ಬರೋಬ್ಬರಿ 2 ಲಕ್ಷ ರಿಯಾಲ್ ವರೆಗೂ ದಂಡ ಕಟ್ಟಬೇಕಾಗುತ್ತದೆ. ಅಂದರೆ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 40 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
27 ಲಕ್ಷ ಮಂದಿ ಪ್ರಜೆಗಳನ್ನು ಹೊಂದಿರುವ ಕತಾರ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29 ಸಾವಿರದಷ್ಟಿದೆ. ಹದಿನಾಲ್ಕು ಮಂದಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮೇಲಾಗಿ ದಿನದಿಂದ ದಿನಕ್ಕೆ ಪ್ರಕರಣಗಳು ಸಾವಿರದ ಲೆಕ್ಕದಲ್ಲಿ ಜಾಸ್ತಿಯಾಗುತ್ತಿದೆ. ಈ ಕಾರಣಕ್ಕೆ ಮುಸ್ಲಿಂ ರಾಷ್ಟ್ರವಾದ ಕತಾರ್ ನಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿಯೂ ಮನೆಯಿಂದ ಹೊರಗೆ ಬರಲು ಹೋಗಬೇಡಿ ಎಂದು ಸೂಚಿಸಲಾಗಿದೆ.