ಕೋವಿಡ್ ವಿಚಾರದಲ್ಲಿ ಜನರೊಂದಿಗೆ ಸರಕಾರ ಚೆಲ್ಲಾಟ : ಡಿ.ಕೆ. ಸುರೇಶ್ DK suresh sparked against bjp Govt saaksha tv
ಬೆಂಗಳೂರು : ಕೋವಿಡ್ ವಿಚಾರದಲ್ಲಿ ತಮಗೆ ಬೇಕಾದಂತೆ ವಾರಾಂತ್ಯ ಕರ್ಫ್ಯೂ, ಲಾಕ್‍ಡೌನ್ ಮಾಡುವ ಮೂಲಕ ರಾಜ್ಯ ಸರಕಾರ ಮತ್ತು ಅಧಿಕಾರಿಗಳು ಜನರ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ತಿಬ್ಬೇಗೌಡ ಅವರ ಜನ್ಮ ದಿನದ ಅಂಗವಾಗಿ ರಾಜರಾಜೇಶ್ವರಿನಗರ ಕಾಂಗ್ರೆಸ್ ಕಾರ್ಯಕರ್ತರು ಬಾಲಕೃಷ್ಣ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕೋವಿಡ್‍ಗಾಗಿ ಉಚಿತ ಬೂಸ್ಟರ್ ಡೋಸ್, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ವಿತರಣೆ, ಆರೋಗ್ಯ ಶಿಬಿರ, ನೇತ್ರದಾನ ಮತ್ತು ರಕ್ತದಾನ ಶಿಬಿರಗಳನ್ನು ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು.
ಮೇಕೆದಾಟು ಹೋರಾಟದ ಸಂದರ್ಭದಲ್ಲಿ ಸರಕಾರ ವೀಕೆಂಡ್ ಕಫ್ರ್ಯೂ ಜಾರಿಗೆ ತಂದಿತು. ಒಂದು ಸಾವಿರ ಕೇಸ್‍ಗಳಿದ್ದ ಸಂದರ್ಭದಲ್ಲಿ ಲಾಕ್‍ಡೌನ್ ಮಾಡುವ ಸರಕಾರ 50 ಸಾವಿರ ಕೇಸುಗಳಿರುವಾಗ ಲಾಕ್‍ಡೌನ್ ತೆರವುಗೊಳಿಸುತ್ತದೆ.
ಇದು ಎಂತಹ ವಿಪರ್ಯಾಸ ನೋಡಿ. ನಾವು ಅಂದೇ ಹೇಳಿದ್ದೆವು. ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‍ಡೌನ್ ಎಂದು ಸ್ಪಷ್ಟವಾಗಿ ತೋರಿಸುತ್ತದೆ.
ರಾಜ್ಯ ಸರಕಾರ ಜನರ ಜತೆ ದೊಂಬರಾಟ ಆಡುತ್ತಿದೆ. ಅಧಿಕಾರಿಗಳು ದೊಂಬರಾಟ ಆಡಿಸುತ್ತಿದ್ದಾರೆ. ಜನರ ಆರೋಗ್ಯದ ಜತೆ ಚೆಲ್ಲಾಟ ಆಡುತ್ತಿದ್ದಾರೆ.
ಲಾಕ್‍ಡೌನ್ ಮಾಡಿದರೆ ಪರಿಹಾರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ.
ಸಚಿವರು, ಅಧಿಕಾರಿಗಳು, ಸಚಿವ ಸಂಪುಟದ ಸಹೋದ್ಯೋಗಿಗಳ ನಡುವೆ ಯಾರಿಗೂ ಪರಸ್ಪರ ಹೊಂದಾಣಿಕೆ ಇಲ್ಲ. ಒಬ್ಬೊಬ್ಬರೂ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇದೆಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಬಿಜೆಪಿಗೆ ತಕ್ಕ ಪಾಠ ಕಲಿಸಲು ಸಜ್ಜಾಗುತ್ತಿದ್ದಾರೆ ಎಂದು ಡಿ.ಕೆ. ಸುರೇಶ್ ನುಡಿದರು.