ಹೆಸರು ಬದಲಾವಣೆಯೇ ಬಿಜೆಪಿಯವರ ಸಾಧನೆ: ಸಿದ್ದರಾಮಯ್ಯ Saaksha Tv
ಬೆಂಗಳೂರು: 2018ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಆದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಬಿಜೆಪಿಯವರು ಮರೆತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಬಿಎಸ್ವೈ ಸಂಪುಟದಲ್ಲಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಈಗ ಸಿಎಂ ಆಗಿದ್ದಾರೆ. ಈಗ ಇವರು ಸಿಎಂ ಆಗಿ ನಿನ್ನೆಗೆ 6 ತಿಂಗಳು ಪೂರೈಕೆಯಾಗಿದೆ. 2018ರ ಚುನಾವಣೆ ಪ್ರಣಾಳಿಕೆಯು ಬೊಮ್ಮಾಯಿ ಸರ್ಕಾರಕ್ಕೂ ಅನ್ವಯವಾಗುತ್ತದೆ. ಪ್ರಣಾಳಿಕೆಯಲ್ಲಿ ನೀರಾವರಿಗೆ 6,300 ಕೋಟಿ ಖರ್ಚು ಮಾಡಿದ್ದೇವೆಂದು ಉಲ್ಲೇಖ ಮಾಡಿದ್ದರು. 5 ವರ್ಷದಲ್ಲಿ 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ ಅವರು ಇದನ್ನು ಮರತಿದ್ದಾರೆ ಎಂದು ಹೇಳಿದರು.
ಅಲ್ಲದೆ ಸಿಎಂ ಬೊಮ್ಮಾಯಿ ನಿನ್ನೆ ಸುಂದರವಾದ ಪುಸ್ತಕ ಬಿಡುಗಡೆ ಮಾಡಿದ್ದರು. ಈ ಸುಂದರ ಪುಸ್ತಕದಲ್ಲಿ ಸಾಧನೆಗಿಂತ ಭರವಸೆಗಳೇ ಹೆಚ್ಚಾಗಿದೆ. ಹಲವಾರು ಹಳೆಯ ಕಾರ್ಯಕ್ರಮಗಳಿಗೆ ಹೆಸರು ಬದಲಿಸಿದ್ದಾರೆ. ಹೆಸರು ಬದಲಾವಣೆ ಮಾಡಿರುವುದೇ ಬಿಜೆಪಿಯವರ ಸಾಧನೆ ಎಂದು ತಿಳಿಸಿದ್ದಾರೆ.
ಹೆಚ್.ಕೆ.ಪಾಟೀಲ್, ಸಚಿವರಾಗಿದ್ದಾಗ ಗ್ರಾಮಸೇವಾ ಕೇಂದ್ರ ಆರಂಭ ಮಾಡಲಾಗಿತ್ತು. ಗ್ರಾಮಸೇವಾ ಕೇಂದ್ರವನ್ನು ಗ್ರಾಮಒನ್ ಕೇಂದ್ರವಾಗಿ ಪರಿವರ್ತನೆ ಮಾಡಲಾಗಿದೆ. ಇದಕ್ಕೆ ಇಷ್ಟು ಪ್ರಚಾರ ಬೇಕಾ? ಇನ್ನೂ ಕಲ್ಯಾಣ ಕರ್ನಾಟಕ ಭಾಗಕ್ಕೆ 1 ಸಾವಿರ ಕೋಟಿ ರೂಪಾಯಿ ಕೊಟ್ಟಿರಬಹುದು, ಆದರೆ ಕಲ್ಯಾಣ ಕರ್ನಾಟಕಕ್ಕೆ 3,500 ಕೋಟಿ ಕೊಡುತ್ತೇವೆ ಅಂದಿದ್ದಾರೆ. ಅಂದರೆ ಈ ವರ್ಷ ಒಂದೇ ಒಂದು ರೂಪಾಯಿ ಕೊಡುವುದಿಲ್ಲ ಎಂದು ಗುಡುಗಿದರು.