ತೆರಿಗೆದಾರರ ನಿರೀಕ್ಷೆ ಹುಸಿಗೊಳಿಸಿದ ಬಜೆಟ್ Saaksha Tv
ನವದೆಹಲಿ: ಈ ಬಾರಿಯೂ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ. 2022-23ನೇ ಸಾಲಿನಲ್ಲೂ ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ಅವರು ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದು, ಸತತ ಮೂರು ವರ್ಷಗಳಿಂದ ಟ್ಯಾಕ್ಸ್ ಸ್ಲ್ಯಾಬ್ ನಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ.
ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿ ತೆರಿಗೆ ಪದ್ಧತಿಯಲ್ಲಿ ಕೆಲ ವಿನಾಯ್ತಿ ಸಿಗಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿದ್ದವು. ಆದರೆ ವಿತ್ತ ಸಚಿವರ ಇಂದಿನ ಭಾಷಣದಲ್ಲಿ ಇಂಥ ಯಾವುದೇ ಪ್ರಸ್ತಾವಗಳು ಮಂಡನೆಯಾಗಿಲ್ಲ. ಆದಾಯ ತೆರಿಗೆಗೆ ಈ ಬಾರಿ ಯಾವುದೇ ಹೊಸ ಸೆಸ್ ಅಥವಾ ಸರ್ಚಾರ್ಜ್ ಸೇರಿಲ್ಲ ಎನ್ನುವುದಷ್ಟೇ ಸಮಾಧಾನಕರ ವಿಚಾರವಾಗಿದೆ.