ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಡಬೂರು,ಚಿರಕನಹಳ್ಳಿ, ಕುಂದಕರೆ, ಉಪಕಾರ ಹಾಗೂ ಬೊಮ್ಮನಹಳ್ಳಿ ಗ್ರಾಮದಲ್ಲಿ ಜಾನುವಾರು ಬಲಿ ಪಡೆಯುತ್ತಿದ ಹುಲಿಯನ್ನು ಸೆರೆ ಹಿಡಿಯಲು ಪಿಸಿಸಿಎಫ್ ಅಜಯ ಮಿಶ್ರಾ ಅವರಿಂದ ಅನುಮತಿ ಸಿಕ್ಕಿದೆ. ಇತ್ತೀಚೆಗೆ 19 ಕ್ಕೂ ಹೆಚ್ಚು ಹಸುಗಳನ್ನು ತಿಂದಿರುವ ಹುಲಿಯನ್ನು ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅನುಮತಿ ದೊರಕಿದೆ. ಅಲ್ಲದೆ ಕೆಲ ದಿನಗಳ ಹಿಂದೆ ಅರಣ್ಯ ಸಚಿವರ ಆನಂದ ಸಿಂಗ್ ಸ್ಥಳಕ್ಕೆ ಭೇಟಿ ರೈತರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ರೈತರು ಕಾಡಂಚಿನಲ್ಲಿ ಸೋಲಾರ್ ಬೇಲಿಗಳು ನಿಷ್ಕ್ರಿಯವಾಗಿವೆ. ಮಳೆಯಿಂದ ಕಂದಕ ಮುಚ್ಚಿಕೊಂಡಿವೆ. ಆದ್ದರಿಂದಲೇ ವನ್ಯಜೀವಿಗಳ ದಾಳಿ ಹೆಚ್ಚುತ್ತಿವೆ.
ಕಳೆದ 10 ವರ್ಷಗಳಿಂದಲೂ ರೈಲ್ವೇ ಕಂಬಿ ಅಳವಡಿಸುವಂತೆ ಮನವಿ ಮಾಡಿದ್ದರೂ ನಿರ್ಲಕ್ಷ ಮಾಡಲಾಗಿದೆ. ಕಂದಕಗಳನ್ನು ದಾಟುವ ಜಿಂಕೆಗಳನ್ನು ಹುಲಿ, ಚಿರತೆ ಹಿಂಬಾಲಿಸಿ ಗ್ರಾಮಗಳತ್ತ ಆಗಮಿಸುತ್ತಿವೆ. ಹುಲಿ ದಾಳಿಗೊಳಗಾದ ಜಾನುವಾರು ಮಾಲೀಕರಿಗೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಸಾಕಾಗುತ್ತಿಲ್ಲ. ಜೀವನೋಪಾಯಕ್ಕೆ ಹೈನುಗಾರಿಕೆಯನ್ನೇ ಅವಲಂಬಿಸಿದ ಕುಟುಂಬಗಳು ಬೀದಿ ಪಾಲಾಗುತ್ತಿವೆ. ವನ್ಯಜೀವಿಗಳು ಅರಣ್ಯದಿಂದ ಹೊರಬರದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಇಂದು ಹುಲಿಯನ್ನು ಸೆರೆ ಹಿಡಿಯಲು ಅನುಮತಿ ದೊರಕಿದೆ. ಹಾಗಾಗಿ ನಾಗರಹೊಳೆ ಯಿಂದ ಅಭಿಮನ್ಯು ಆನೆಗಾಗಿ ನಿರೀಕ್ಷೆಯಲ್ಲಿದ್ದಾರೆ.