ಗಲ್ವಾನ್ ಕಣಿವೆ ಘರ್ಷಣೆಯಿಂದ ಚೀನಾಗೆ ಸಾಕಷ್ಟು ಹೊಡೆತ: ಪ್ರಮುಖ ಪತ್ರಿಕೆಯಲ್ಲಿ ವರದಿ ಬಹಿರಂಗ Saaksha Tv
ನವದೆಹಲಿ: 2020ರಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯಲ್ಲಿ ಚೀನಾಗೆ ಸಾಕಷ್ಟು ಹೊಡೆತ ಬಿದ್ದಿದೆ ಎಂದು ಪತ್ರಿಕೆಯೊಂದು ವರದಿ ಬಿಡುಗಡೆ ಮಾಡಿದೆ.
ಗಲ್ವಾನ್ ಘರ್ಷಣೆ ವೇಳೆ ಬಲವಾದ ಪ್ರವಾಹದೊಂದಿಗೆ ನದಿಯನ್ನು ದಾಟುವ ಸಂದರ್ಭದಲ್ಲಿ ಅನೇಕ ಚೀನೀ ಸೈನಿಕರು ಸಮಸ್ಯೆಗೆ ಸಿಲುಕಿ ಸಾವನ್ನಪ್ಪಿದ್ದಾರೆಂಬ ಮಾಹಿತಿಯಿದೆ. ಆದರೆ ಭದ್ರತಾ ಕಾರಣಗಳಿಗಾಗಿ ಅವರು ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ಆಸ್ಟ್ರೇಲಿಯಾದ ಪ್ರಮುಖ ಪ್ರತ್ರಿಕೆ ದಿ ಕ್ಲಾಕ್ಸನ್ (The Klaxon ) 2020ರ ಗಲ್ವಾನ್ ಘರ್ಷಣೆಯ ಕುರಿತಾಗಿ ತನಿಖಾ ವರದಿಯಲ್ಲಿ ಹೇಳಿದೆ.
ಇದರ ಅನ್ವಯ ಈ ಘರ್ಷಣೆಯಲ್ಲಿ ಭಾರತಕ್ಕಿಂತ ಹೆಚ್ಚಾಗಿ ಚೀನಾದ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ. ಪ್ರಮುಖವಾಗಿ ಹೊಡೆದಾಟಕ್ಕಿಂತ ಹೆಚ್ಚಾಗಿ ನದಿಯನ್ನು ದಾಟುವಾಗ ಕನಿಷ್ಠ 38 ಸೈನಿಕರು ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ಈ ಘರ್ಷಣೆಯ ನಂತರ ಕಳೆದೊಂದು ವರ್ಷದಲ್ಲಿ ಭಾರತದ ಶೇ.43 ರಷ್ಟು ಗ್ರಾಹಕರು ಚೀನಾದ ವಸ್ತುಗಳ ಖರೀದಿಸಿಲ್ಲ ಎಂದು ಇತ್ತೀಚೆಗೆ ಸಮೀಕ್ಷೆಯ ವರದಿಯೊಂದು ತಿಳಿಸಿತ್ತು. ಜೊತೆಗೆ ಚೀನಾ ಹೆಚ್ಚಿನ ಹಾನಿ ಅನುಭವಿಸಿತ್ತು ಎಂಬ ಮಾಹಿತಿಯಿತ್ತು. ಇದೀಗ ಚೀನಾ ಹೇಳಿಕೊಂಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಅನುಭವಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಜೂನ್ 15 -16ರಂದು ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಸೇರಿದಂತೆ 20 ಭಾರತೀಯ ಸೈನಿಕರು ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಿ ಪಿಎಲ್‌ಎ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆಯಲ್ಲಿ ಹುತಾತ್ಮರಾದರು. ಈ ಘರ್ಷಣೆಯಲ್ಲಿ ತನ್ನ ಐವರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಚೀನಾ ಸಹ ಒಪ್ಪಿಕೊಂಡಿತ್ತು. ಇದೀಗ ಹೆಚ್ಚು ಸೈನಿಕರು ಹುತಾತ್ಮರಾಗಿರುವ ಬಗ್ಗೆ ವರದಿ ಪ್ರಕಟಗೊಂಡಿದೆ.








