ಬೆಂಗಳೂರು : ರಾಜ್ಯ ಸರ್ಕಾರ ಕೊರೊನಾ ಅಬ್ಬರದ ನಡುವೆ ಇಂದಿನಿಂದ ಬಸ್ ಸಂಚಾರಕ್ಕೆ ಅನುಮತಿ ನೀಡಿದೆ. ಲಾಕ್ ಡೌನ್ ಹಿನ್ನೆಲೆ ಇಷ್ಟು ದಿನ ಮನೆಯಲ್ಲೇ ಇದ್ದ ಜನರು ತಮ್ಮ ಊರುಗಳತ್ತ ಹೋಗಲು ಬಸ್ ನಿಲ್ಡಾಣದತ್ತ ಆಗಮಿಸುತ್ತಿದ್ದಾರೆ. ಆದರೆ, ಬಿ.ಎಸ್ ಯಡಿಯೂರಪ್ಪ ಸರ್ಕಾರದ ಅವೈಜ್ಞಾನಿಕ ಸಂಚಾರ ಮಾರ್ಗಸೂಚಿಯು ಗೊಂದಲದ ಗೂಡಾಗಿದ್ದು, ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಿನ್ನೆ ರಾಜ್ಯ ಸರ್ಕಾರ ಬಸ್ ಸಂಚಾರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ತಮ್ಮ ಮಾರ್ಗಸೂಚಿಯಲ್ಲಿ ಸರ್ಕಾರ ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ ಏಳು ಗಂಟೆಯವರೆಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದ ಖುಷಿಯಾದ ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ದೌಡಾಯಿಸಿದ್ದಾರೆ. ಆದರೆ ಬೀದರ್ ಹಾಗೂ ರಾಯಚೂರು ಸೇರಿದಂತೆ ದೂರದ ಊರುಗಳಿಗೆ ನಿಗದಿತ 7 ಗಂಟೆ ಸಮಯದಲ್ಲಿ ಪ್ರಯಾಣಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಒಂದು ವೇಳೆ ಪ್ರಯಾಣಿಕರು ದೂರದ ಜಿಲ್ಲಾ ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ
ತಲುಪಿದರೂ ಅಲ್ಲಿಂದ ತಮ್ಮ ಹಳ್ಳಿಗಳಿಗೆ ಹೋಗಲು ಅವರಿಗೆ ಬಸ್ ವ್ಯವಸ್ಥೆ ಇರುತ್ತದೆಯೇ. ನಂತರ ಅವರೇನು ಮಾಡಬೇಕೆಂಬುದನ್ನು ಯಾರು ಹೇಳುತ್ತಿಲ್ಲ. ಇದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ
ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಹೇಗೆ..?
ಇದೆಲ್ಲದರ ನಡುವೆ ದೂರದ ಊರುಗಳಿಗೆ ಪ್ರಯಾಣಿಸುವ ವೇಳೆ ಮಾರ್ಗ ಮಧ್ಯೆ ಊಟದ ವ್ಯವಸ್ಥೆ ಹೇಗೆ ಎಂಬೋದು ಪ್ರಯಾಣಿಕರ ಪ್ರಶ್ನೆಯಾಗಿದೆ. ಸದ್ಯ ಹೋಟೆಲ್ ಗಳನ್ನು ತೆರೆಯಲು ಅವಕಾಶವಿದ್ದರೂ ಪಾರ್ಸೆಲ್ ಮಾತ್ರ ತೆಗೆದುಕೊಳ್ಳಲು ಅವಕಾಶ ಇದೆ. ಇನ್ನು ಪಾರ್ಸೆಲ್ ಗೆ ಸಮಯ ತೆಗೆದುಕೊಳ್ಳುವುದಲ್ಲದೇ, ಅದನ್ನು ತಂದು ಬಸ್ ನಲ್ಲಿ ತಿನ್ನುವ ವ್ಯವಸ್ಥೆ ಇದೆಯೇ..? ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.
ಹೀಗಾಗಿ ದೂರದ ಊರುಗಳಿಗೆ ಪ್ರಯಾಣಿಸುವಾಗ ಯಾವ ಕ್ರಮಗಳನ್ನು ಅನುಸರಿಸಬೇಕೆಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸದಿರುವುದು ಇದೀಗ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ಬಸ್ ಇಲ್ಲದೆ ಪ್ರಯಾಣಿಕರ ಪರದಾಟ
ಇನ್ನು ದೂರದ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರ “10 ಗಂಟೆಯ ನಂತರ ಉತ್ತರ ಕರ್ನಾಟಕದ ದೂರದ ಕೆಲವು ಊರುಗಳಿಗೆ ಬಸ್ ಇರುವುದಿಲ್ಲ ಎಂಬ ಹೇಳಿಕೆ ಶಾಕ್ ನೀಡಿತ್ತು. ಈಗಾಗಲೇ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಈ ಹೇಳಿಕೆಯಿಂದ ತಬ್ಬಿಬ್ಬಾಗಿದ್ದು, ಏನು ಮಾಡುವುದು ಎಂಬ ಯೋಚನೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದರಿಂದ ಎಚ್ಚೆತ್ತಿರುವ ಸರ್ಕಾರ ಉತ್ತರ ಕರ್ನಾಟಕಕ್ಕೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಆದ್ರೆ ಸರ್ಕಾರ ಬೆಳಗ್ಗೆ ಏಳು ಗಂಟೆಯಿAದ ರಾತ್ರಿ ಏಳು ಗಂಟೆಯವರೆಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಿದೆ. ಈ ಅವಧಿಯಲ್ಲಿ ದೂರದ ಊರುಗಳಿಗೆ ಹೇಗೆ ತಲುಪುತ್ತಾರೆ ಎಂಬುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ.
ಇನ್ನು ಈ ಹಿಂದೆಯೂ ಸಹ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಲು ಸರ್ಕಾರ ಮುಂದಾಗಿತ್ತು. ಆಗ ಆರಂಭದಲ್ಲಿ ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ಸಂಗ್ರಹಿಸಿ ಭಾರಿ ಟೀಕೆಗಳಿಗೆ ಒಳಲಾಗಿತ್ತು. ಬಳಿಕ ವಿರೋಧ ಪಕ್ಷಗಳ ಒತ್ತಾಯದ ಮೇರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಮತ್ತೆ ಇದೀಗ ರಾಜ್ಯ ಸರ್ಕಾರದ ಅವೈಜ್ಞಾನಿಕ ಸಂಚಾರ ಮಾರ್ಗಸೂಚಿಯು ಗೊಂದಲದ ಗೂಡಾಗಿದ್ದು, ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ.