ವಿಟ್ಲ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವಿಟ್ಲದ ಕನ್ಯಾನದ ಗ್ರಾಮದ ಬಾಳೆಕೋಡಿ ಶಿಲಾಂಜನಾ ಕ್ಷೇತ್ರದ ಡಾ. ಶಶಿಕಾಂತ ಸ್ವಾಮೀಜಿ ಅಸ್ತಂಗತರಾಗಿದ್ದಾರೆ. 45 ವರ್ಷ ಪ್ರಾಯದ ಸ್ವಾಮೀಜಿ ಗಳು ಬಾಳೆಕೋಡಿ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು. ಪ್ರತಿನಿತ್ಯ ಬಾಳೆಕೋಡಿಗೆ ಕರ್ನಾಟಕ ಹಾಗೂ ಕೇರಳ ರಾಜ್ಯದಿಂದ ಹಲವು ಭಕ್ತರು ಭೇಟಿ ನೀಡುತ್ತಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಕ್ಷೇತ್ರದ ಸಮೀಪದಲ್ಲಿರುವ ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಕ್ಷೇತ್ರದಲ್ಲಿಯೇ ನಿಧನರಾಗಿದ್ದಾರೆ. ಇನ್ನು ಅವರಿಗೆ ಡಾಕ್ಟರೇಟ್ ಬಿರುದು ಕೂಡ ಲಭಿಸಿತ್ತು. ಸುಳ್ಯ ಭಾಗದಲ್ಲೂ ಸಾಕಷ್ಟು ಪ್ರಸಿದ್ಧರಾಗಿದ್ದ ಶ್ರೀಗಳು ಜಾಲ್ಸಾರಿನಲ್ಲಿ ಕಚೇರಿವೊಂದನ್ನು ತೆರೆದು ವಾರಕ್ಕೊಮ್ಮೆ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಬಂಟ್ವಾಳ ತಾಲೂಕಿನ ಮುರ ಬಾಳೆ ಕೋಡಿಮಠದ ಮಠಾಧೀಶರಾದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರು ತಮ್ಮ ಸಮುದಾಯದಲ್ಲಿ ಆತ್ಮವಿಶ್ವಾಸದ ಬೆಳಕು ಬೀರಿದ ಧಾರ್ಮಿಕ ಸಾಧಕ. ಸಾಹಿತ್ಯ ಪ್ರೇಮಿಗಳೂ ಆಗಿದ್ದ ಅವರು ಅನೇಕ ಪ್ರಶಸ್ತಿ ಪುರಸ್ಕೃತರು. ಮಠದ ಮೂಲಕ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಕೈಗೊಂಡು ಪ್ರಸಿದ್ಧರಾಗಿದ್ದರು.