BJP | ಇಬ್ರಾಹಿಂ ಹೆಜ್ಜೆ ಧೂಳನ್ನೂ ಬಿಜೆಪಿಗೆ ಸೇರಿಸಲ್ಲ : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಎಂಎಲ್ ಸಿ ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ಅವರು ಜೆಡಿಎಸ್ ಗೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಮಧ್ಯೆ ಸಚಿವ ಬಿ.ಶ್ರೀರಾಮುಲು ಅವರು, ಇಬ್ರಾಹಿಂ ಅವರು ಬಿಜೆಪಿಗೆ ಸೇರಿದರೇ ಸ್ವಾಗತ ಎಂದಿದ್ದರು.
ಇದಕ್ಕೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಸಿ. ಎಂ. ಇಬ್ರಾಹಿಂ ಹೆಜ್ಜೆಯ ಧೂಳನ್ನು ಸಹ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಇಬ್ರಾಹಿಂ ಏನು, ಅವರ ಮಾಡಿದ ಅನ್ಯಾಯ ಏನು ಎಂಬುದು ಎಲ್ಲರಿಗೆ ಗೊತ್ತು. ಬಿಜೆಪಿ ಹೋರಾಟ ಮಾಡಿ ಸಚಿವ ಸಂಪುಟದಿಂದ ಅವರನ್ನು ಕಿತ್ತು ಹಾಕಿಸಿತ್ತು. ಭದ್ರಾವತಿಯಲ್ಲಿ ಅವರ ಸಹೋದರಿಗೆ ಏನು ಅನ್ಯಾಯ ಮಾಡಿದ್ದಾರೆ ಎಂಬುದು ಜಿಲ್ಲೆ ಹಾಗೂ ರಾಜ್ಯಕ್ಕೆ ಗೊತ್ತಿದೆ. ಹಾಗಾಗಿ, ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ತಪ್ಪಿದ್ದಕ್ಕಾಗಿ ಸಿ.ಎಂ.ಇಬ್ರಾಹಿಂ ಅವರು ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ತ್ಯಜಿಸುವುದಾಗಿ ತಿಳಿಸಿದ್ದಾರೆ. ಅವರು ಫೆಬ್ರವರಿ 14 ರಂದು ಜೆಡಿಎಸ್ ಸೇರಲಿದ್ದಾರೆ ಎಂದು ವರದಿಯಾಗಿದೆ.









