ರಾಹುಲ್ ಗಾಂಧಿಗೆ ಭಾರತಕ್ಕಿಂತ ಚೀನಾ ಮೇಲೆ ನಂಬಿಕೆ ಹೆಚ್ಚು: ರಾಜನಾಥ್ ಸಿಂಗ್ Saaksha Tv
ನವದೆಹಲಿ: ರಾಹುಲ್ ಗಾಂಧಿಗೆ ಭಾರತದ ಸೈನ್ಯ ಮತ್ತು ಸೈನಿಕರ ಪರಾಕ್ರಮಕ್ಕಿಂತ ಚೀನಾ ಮೇಲಿನ ನಂಬಿಕೆಯೇ ಹೆಚ್ಚು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಗಲ್ವಾನ್ ಗಡಿಯಲ್ಲಿ ಚೀನಾ ಮತ್ತು ಭಾರತೀಯ ಯೋಧರ ನಡುವೆ ನಡೆದ ಗುದ್ದಾಟದಲ್ಲಿ ಚೀನಾದ 38 ರಿಂದ 50 ಯೋಧರು ಬಲಿ ಆಗಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮವೇ ಹೇಳಿದೆ. ಆದರೆ ರಾಹುಲ್ ಗಾಂಧಿ ಅವರು ತಮ್ಮ ಯೋಧರ ಸಾವಿನ ಬಗ್ಗೆ ಸುಳ್ಳು ಮಾಹಿತಿ ಹೇಳುವ ಚೀನಾದ ಮಾಧ್ಯಮ ವರದಿಯನ್ನು ನಂಬುತ್ತಾರೆ. ಭಾರತೀಯ ಸೈನಿಕರ ಧೈರ್ಯ ಮತ್ತು ಶೌರ್ಯದ ಬಗ್ಗೆ ಪ್ರಶ್ನೆ ಕೇಳುತ್ತಾರೆ ಎಂದು ಟೀಕಿಸಿದರು.
ಭಾರತ ಇನ್ನು ಮುಂದೆ ದುರ್ಬಲವಾಗಿಲ್ಲ ಎಂದು ನಾವು ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ. ಗಡಿಯೊಳಗೆ ಅಥವಾ ಹೊರಗಿನ ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಅದು ಈಗ ಸಮರ್ಥವಾಗಿದೆ. ಉರಿ ಮತ್ತು ಪುಲ್ವಾಮಾ ದಾಳಿಯ ನಂತರ ನಮ್ಮ ಸೈನಿಕರು ಪಾಕಿಸ್ತಾನದ ಭೂಪ್ರದೇಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ನಡೆಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಚಿತ್ರಣವೇ ಬದಲಾಗಿದೆ. 2014ರವರೆಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ನಾಯಕರನ್ನು ಯಾವ ದೇಶವೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಭಾರತ ಏನನ್ನಾದರೂ ಹೇಳಿದಾಗ ಇಡೀ ಜಗತ್ತು ಕೇಳುತ್ತದೆ ಎಂದರು.
ಕಾಂಗ್ರೆಸ್, ಇನ್ನೀತರ ಪಕ್ಷಗಳು ಅಧಿಕಾರಕ್ಕಾಗಿ ಮಾತ್ರ ಚುನಾವಣೆಗೆ ಸ್ಪರ್ಧಿಸುತ್ತಿವೆ. ಆದರೆ ಬಿಜೆಪಿಯ ಗುರಿ ರಾಷ್ಟ್ರ ನಿರ್ಮಾಣವಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದಲ್ಲಿ ಪಕ್ಷದ ಆಡಳಿತದಲ್ಲಿ ಗೂಂಡಾಗಳ ಚೈತನ್ಯ ಹೆಚ್ಚಿತ್ತು ಮತ್ತು ರಾಜಕೀಯ ವಲಯಗಳಲ್ಲಿಯೂ ಅವರ ಪ್ರಾಬಲ್ಯ ಇತ್ತು. ಬಿಜೆಪಿ ಆಡಳಿತದಲ್ಲಿ ಅದು ಸಂಪೂರ್ಣವಾಗಿ ಬದಲಾಗಿದೆ ಎಂದು ತಿಳಿಸಿದರು.










