ಬೆಂಗಳೂರು, ಮೇ 19 : ಯಾಕೋ ಏನೋ ಈ ಮಧ್ಯೆ ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಅವರಿಗೆ ಟೈಮೇ ಸರಿಲ್ಲ ಅಂತ ಕಾಣ್ಸುತ್ತೆ. ಟ್ರಬಲ್ ಶೂಟರ್ ಎಂದೇ ಖ್ಯಾತಿ ಗಳಿಸಿರುವ ಡಿ.ಕೆ ಸಾಹೇಬನಿಗೆ ಕೊರೊನಾ ವೈರಸ್ ಸೋಂಕು ಬಿಟ್ಟುಬಿಡದೇ ಕಾಡುತ್ತಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭದ ಮೇಲೆ ಭಾನುವಾರದ ಸಂಪೂರ್ಣ ಲಾಕ್ ಡೌನ್ ಕರಿನೆರಳಾಗಿ ಪರಿಣಮಿಸಿದೆ. ಹೀಗಾಗಿ ಮೇ.31ರಂದು ನಿಗದಿಯಾಗಿದ್ದ ಪದಗ್ರಹಣ ಸಮಾರಂಭ ಮುಂದೂಡಿಕೆಯಾಗಿದೆ.
ಕೆಪಿಸಿಸಿ ಅಧ್ಯಕ್ಷರನ್ನಾಗಿ ಡಿ.ಕೆ ಶಿವಕುಮಾರ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಫೈನಲ್ ಮಾಡುತ್ತಿದ್ದಂತೆ ಅದ್ಧೂರಿಯಾಗಿ ಬೃಹತ್ ಸಮಾವೇಶದ ಮೂಲಕ ಅಧಿಕಾರ ಸ್ವೀಕರಿಸಲು ಡಿಕೆಶಿ ಪ್ಲಾನ್ ಮಾಡಿಕೊಂಡಿದ್ದರು. ಆದ್ರೆ ಟ್ರಬಲ್ ಶೂಟರ್ ಗೆ ಕೊರೊನಾ ವೈರಸ್ ಟ್ರಬಲ್ ನೀಡಿ, ಶಿವಕುಮಾರ್ ಆಸೆಗೆ ನೀರೆರಚಿತು.
ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿಯಾದ ಲಾಕ್ ಡೌನ್, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಂಡು ಪಕ್ಷವನ್ನು ಬಲಪಡಿಸುವ ಡಿಕೆಶಿ ಉದ್ದೇಶಕ್ಕೆ ಬ್ರೇಕ್ ಹಾಕ್ತು. ಈ ಮಧ್ಯೆ ಚೆಕ್ ವಿಚಾರವಾಗಿಯೂ ಡಿಕೆಶಿ ಮುಜುಗರಕ್ಕೀಡಾದರು. ಇದರಿಂದ ಬೇಸತ್ತ ಶಿವಕುಮಾರ್ ಇದೇ ತಿಂಗಳು 31ರಂದು ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದರು. ಆದ್ರೆ ಕೊರೊನಾ ಹಿನ್ನಲೆಯಲ್ಲಿ ರಾಜ್ಯದಲ್ಲಿ ರವಿವಾರ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಆದೇಶಿಸಿದ ಪರಿಣಾಮ ಪದಗ್ರಹಣ ಸಮಾರಂಭ ಮುಂದೂಡಿಕೆಯಾಗಿದೆ.ಮೇ.31 ಭಾನುವಾರವಾದ ಕಾರಣ ಕಾರ್ಯಕ್ರಮ ಮುಂದೂಡಿಕೆಯಾಗಿದ್ದು, ಶೀಘ್ರ ಮತ್ತೊಂದು ಮುಹೂರ್ತ ನಿಗಧಿಪಡಿಸುವುದಾಗಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ಸರ್ಕಾರದ ಆದೇಶವನ್ನು ಗೌರವಿಸಿ ಸಮಾರಂಭ ಮುಂದೂಡಲಾಗುತ್ತಿದೆ. ಹೈಕಮಾಂಡ್ ತಮ್ಮನ್ನು ಅಧ್ಯಕ್ಷರನ್ನಾಗಿ ಘೋಷಿಸಿದ ದಿನದಿಂದಲೂ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಪದಗ್ರಹಣ ಕಾರ್ಯಕ್ರಮಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾರೂ ಬರುವುದು ಬೇಡ. ಮಾಧ್ಯಮಗಳ ಮೂಲಕವೇ ನಾವು ಪದಗ್ರಹಣ ಕಾರ್ಯಕ್ರಮ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ರಾಜ್ಯದ ಉದ್ದಗಲಕ್ಕೂ 7200 ಕಡೆ ಈ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದ್ದು,ಗ್ರಾಮ ಪಂಚಾಯತಿಯಿಂದ ನಗರದ ಎಲ್ಲಾ ಕಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲಾ ಕಡೆ ಎರಡು ಟಿವಿ ವ್ಯವಸ್ಥೆ ಮಾಡಲಾಗುತ್ತದೆ. ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ವಾಚಿಸುವ ಮೂಲಕ ಅಧಿಕೃತ ಕಾರ್ಯಾರಂಭಕ್ಕೆ ಚಾಲನೆ ನೀಡುವ ತಮ್ಮ ಆಶಯವನ್ನು ಶಿವಕುಮಾರ್ ಹೇಳಿಕೊಂಡಿದ್ದಾರೆ.
ಇನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿಲ್ಲ ಎಂದು ತಾವು ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ರಸ್ತೆಗಿಳಿದು ಪ್ರತಿಪಕ್ಷವಾಗಿ ಕೆಲಸ ಮಾಡಿದ್ದೇನೆ. ಜನರ ಮಧ್ಯೆ ಇದ್ದು ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಪಕ್ಷದ ನಾಯಕರ ಜೊತೆ ಸೇರಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ಸಂಘ ಸಂಸ್ಥೆಗಳೊಂದಿಗೆ ಜನರಿಗೆ ಕೋವಿಡ್ ಲಾಕ್ ಡೌನ್ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಹೇಳಿದರು.
ಇದೇ ಸರ್ಕಾರದ ವಿರುದ್ಧ ಹರಿಹಾಯ್ದ ಡಿಕೆ ಶಿವಕುಮಾರ್, ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ. ಯಾವುದೇ ಜನಪರ ಕಾರ್ಯಕ್ರಮ ಮಾಡಲಿಲ್ಲ. ಕೇಂದ್ರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆಯಾದರೂ ಭೌತಿಕವಾಗಿ ಎಲ್ಲಿಯೂ ನೆರವು ದೊರೆಯುತ್ತಿಲ್ಲ. ಬ್ಯಾಂಕುಗಳಿಂದ ಸಾಲ ಪಡೆದು ಬಡ್ಡಿಕಟ್ಟುವಂತೆ ಮಾಡುವ ಮೂಲಕ ಪ್ರಧಾನಿ ಮೋದಿ ಎಲ್ಲರನ್ನು ಸಾಲಗಾರರನ್ನಾಗಿ ಮಾಡುತ್ತಿದ್ದಾರೆ. ಸಬ್ಸಿಡಿ, ಗ್ರಾಂಟ್ ಮೂಲಕ ನೆರವು ಕೊಟ್ಟಿದ್ದರೆ ಒಪ್ಪಬಹುದಿತ್ತು. ಯಡಿಯೂರಪ್ಪ ಘೋಷಿಸಿರುವ 1600 ಕೋಟಿ ಪ್ಯಾಕೇಜ್ ನಲ್ಲಿ ಇದುವರೆಗೂ ಯಾರಿಗೂ ಒಂದು ರೂಪಾಯಿ ಯಾರಿಗೂ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.








