ರಾಹುಲ್ ಗಾಂಧಿ ಅವರಿಗೆ ಪಂಜಾಬ್‌ನಲ್ಲಿ ಭದ್ರತಾ ಲೋಪ Saaksha Tv
ಪಂಜಾಬ್: ಪಂಜಾಬ್ ನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯಕ್ಕೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ಬಾವುಟ ಸೆದಿರುವ ಘಟನೆ ಪಂಜಾಬ್ ನ ಹರ್ಷಿಲಾ ರೆಸಾರ್ಟ್ ಬಳಿ ನಡೆದಿದೆ.
ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ರಾಹುಲ್ ಗಾಂಧಿಯವರು ಹಲ್ವಾರದಿಂದ ಲೂಧಿಯಾನದ ಹಯಾತ್ ರೀಜೆನ್ಸಿಗೆ ತೆರಳುವ ವೇಳೆ ಕಾರು ಹರ್ಷಿಲಾ ರೆಸಾರ್ಟ್ ಬಳಿ ಬಂದಿದೆ. ಆಗ ರಾಹುಲ್ ಗಾಂಧಿ ಅವರು ಕಾರಿನ ಕಿಟಿಕಿಯ ಬಾಗಿಲು ತೆರೆದು ಶುಭಾಶಯಗಳನ್ನು ಸ್ವೀಕರಿಸುತ್ತಿದ್ದರು. ಈ ನಡುವೆ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಕಾರಿನತ್ತ ಯುವಕನೊಬ್ಬ ಬಾವುಟ ಎಸೆದಿದ್ದಾನೆ.
ಇದಾದ ಬಳಿಕ ರಾಹುಲ್ ಗಾಂಧಿ ಕಾರಿನ ಗಾಜುಗಳನ್ನು ಮುಚ್ಚಿದ್ದಾರೆ. ಘಟನೆಯ ನಂತರ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಎಲ್ಲ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಧ್ವಜ ಎಸೆದ ಯುವಕ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ (ಎನ್‌ಎಸ್‌ಯುಐ) ಕಾರ್ಯಕರ್ತನಾಗಿದ್ದು, ಸಿಟ್ಟಿನಿಂದ ರಾಹುಲ್ ಗಾಂಧಿ ಕಡೆಗೆ ಧ್ವಜ ಎಸೆದಿದ್ದಾನೆ ಎನ್ನಲಾಗಿದೆ. ಈತ ಜಮ್ಮು ಕಾಶ್ಮೀರದ ನಿವಾಸಿ ಎಂದು ಹೇಳಲಾಗಿದೆ.
ಘಟನೆಯ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಖಡ್ ಕಾರು ಚಾಲನೆ ಮಾಡುತ್ತಿದ್ದರು, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಚನ್ನಿ ಮತ್ತು ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಹಿಂದೆ ಕುಳಿತಿದ್ದರು.









