ದೇಶದಲ್ಲಿ ಕೊರೊನಾಸುರ ಅಟ್ಟಹಾಸ ಮುಂದುವರೆದಿದೆ. ಪ್ರಾರಂಭದಲ್ಲಿ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ನಾಲ್ಕನೇ ಹಂತದ ಲಾಕ್‌ಡೌನ್ ಸಡಿಲ ಮಾಡಿದ್ದಾರೆ. ಈ ನಡುವೆ ಕೊರೊನಾಸುರ ತನ್ನ ಹಾವು ಏಣಿಯಾಟ ಮುಂದುವರೆಸಿದ್ದಾನೆ. ಲಾಕ್ ಡೌನ್ ನಿಂದಾಗಿ ಸಾಕಷ್ಟು ಜನ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವು ಸಹ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದೆ. ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆಗಿರುವುದನ್ನು ವರವಾಗಿ ಮಾಡಿಕೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ರಾಜ್ಯದ ಬಿಜೆಪಿ ಸರ್ಕಾರ ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವ ಹುನ್ನಾರ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯದ ಪಂಚಾಯತಿಗಳಿಗೆ 2020 ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಲಾಕ್ ಡೌನ್ ಮಾಡಲಾಯಿತು. ಹಾಗಾಗಿ ಪಂಚಾಯತಿ ಚುನಾವಣೆಗಳನ್ನು ಚುನಾವಣಾ ಆಯೋಗ ಮುಂದೂಡಿತ್ತು. ರಾಜ್ಯದಲ್ಲಿ ಪಂಚಾಯತಿಗಳ ಪುನರ್ ವಿಂಗಡಣೆಯಾಗಿ 5-6 ವರ್ಷವಾಗಿದೆ. ಪುನರ್ ವಿಂಗಡಣೆ ನಂತರ ಪಂಚಾಯತಿಗಳ ಸಂಖ್ಯೆ 5628 ರಿಂದ 6041ಕ್ಕೆ ಏರಿದೆ. ಈ ಎಲ್ಲಾ ಪಂಚಾಯತಿಗಳಿಗೆ 2015ರಲ್ಲಿ ಚುನಾವಣಾ ಸುಧಾರಣೆಗಳ ಹೊಸ ಕಾನೂನಿನ ಮೂಲಕ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದಿದೆ. ಈಗ 2ನೇ ಸಾರ್ವತ್ರಿಕ ಚುನಾವಣೆಯಾಗಬೇಕಿದೆ. ಈ ಹೊತ್ತಿನಲ್ಲಿ ಬಿಜೆಪಿ ಅಧಿಕಾರದ ಲಾಭ ಪಡೆಯುವ ಲೆಕ್ಕಾಚಾರ ಆಗುತ್ತಿದೆ ಎಂಬ ಗಂಭೀರ ಆರೋಪ ಸರ್ಕಾರದ ವಿರುದ್ಧ ಕೇಳಿ ಬಂದಿವೆ.








