ಹೊಸದಿಲ್ಲಿ, ಮೇ 20 : ಕೊರೋನಾ ಸೋಂಕಿನ ಭೀತಿಯಿಂದ ವಿಶ್ವದೆಲ್ಲೆಡೆ ಸುಮಾರು ಮೂರು ತಿಂಗಳಿನಿಂದ ಲಾಕ್ ಡೌನ್ ಆದೇಶ ಜಾರಿಯಲ್ಲಿತ್ತು. ಆದರೆ ದೀರ್ಘ ಕಾಲದವರೆಗೆ ಲಾಕ್ ಡೌನ್ ಮುಂದುವರಿಸುವುದರಿಂದ ಈಗಾಗಲೇ ಕುಸಿದಿರುವ ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ದುಸ್ಥಿತಿಗೆ ಇಳಿಯುವ ಭೀತಿಯಿಂದಲೂ, ದೇಶದ ಹಿತದೃಷ್ಟಿಯಿಂದಲೂ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ. ಕೆಲವು ದೇಶಗಳು ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಸುತ್ತಿದ್ದರೆ, ಇನ್ನೂ ಕೆಲವು ದೇಶಗಳು ಲಾಕ್ ಡೌನ್ ಮುಂದುವರಿಸಿದೆ.
ಭಾರತ : ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಬಹುತೇಕ ರಾಜ್ಯಗಳಲ್ಲಿ ನಿರ್ಬಂಧಗಳು ಸಡಿಲಿಕೆಯಾಗುತ್ತಿದೆ. ಕಂಟೈನ್ ಮೆಂಟ್ ಪ್ರದೇಶ ಹೊರತು ಪಡಿಸಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.
ಚೀನಾ: ಕೊರೊನಾ ಸೋಂಕಿನ ಕೇಂದ್ರ ಚೀನಾದಲ್ಲಿ ಮತ್ತೆ ಹೊಸ ಪ್ರಕರಣಗಳು ಪತ್ತೆಯಾಗಿದೆ. ಅವುಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳಿಲ್ಲದ ಪ್ರಕರಣಗಳು ಪತ್ತೆಯಾಗಿ ಎರಡನೇ ಹಂತದ ಸೋಂಕು ವ್ಯಾಪಿಸುವಿಕೆ ಆರಂಭವಾಗಿದೆ. ಹಾಗಾಗಿ ಸಡಿಲಿಕೆಯಾಗಿದ್ದ ಮತ್ತೆ ಜಾರಿಯಾಗುವಂತಿದೆ.
ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಇಳಿಕೆಯಾಗಿರುವ ಕಾರಣ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.
ಅತ್ಯಂತ ಹೆಚ್ಚಿನ ಜನಸಂಖ್ಯೆ ಇರುವ ನ್ಯೂ ಸೌತ್ ವೇಲ್ಸ್ ನಲ್ಲಿ ಹೋಟೆಲ್ ಗಳು, ಆಟದ ಮೈದಾನಗಳು, ಈಜುಕೊಳಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮೇ 25 ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದೆ.
ಮಲೇಷ್ಯಾ : ಜೂನ್ 9 ರವರೆಗೆ ಜನರ ಸಂಚಾರ, ವ್ಯಾಪಾರದ ಮೇಲೆ ನಿರ್ಬಂಧ, ನೈರ್ಮಲ್ಯ ಕಾಪಾಡುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ನಾಗರಿಕರಿಗೆ ಸೂಚಿಸಲಾಗಿದೆ.
ಬ್ರಿಟನ್ : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಲಾಕ್ ಡೌನ್ ಸಡಿಲಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಬ್ರಿಟನ್ ನಲ್ಲಿ ಪರ ವಿರೋಧ ಚರ್ಚೆಗಳ ಬಳಿಕ ಅವರು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪಾಕಿಸ್ತಾನ : ಪಾಕಿಸ್ತಾನದಲ್ಲಿ ಹೊಸತಾಗಿ 1,352 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 40,000 ಗಡಿ ದಾಟಿದೆ. ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 873ಕ್ಕೆ ಏರಿದೆ. ಆದರೆ ದೀರ್ಘ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಚಟುವಟಿಕೆಗೆ ಹೊಡೆತ ಬಿದ್ದಿರುವುದರಿಂದ ಲಾಕ್ ಡೌನ್ ಸಡಿಲಿಕೆ ಮಾಡಲು ನಿರ್ಧರಿಸಿದೆ.
ತೈವಾನ್ : ಚೀನಾದ ಪಕ್ಕದ ದೇಶ ತೈವಾನ್ ಕೊರೋನಾ ವಿರುದ್ಧದ ಸಮರದಲ್ಲಿ ಬಹಳಷ್ಟು ಜಯ ಸಾಧಿಸಿದೆ. ಇಲ್ಲಿಯವರೆಗೆ ತೈವಾನ್ ನಲ್ಲಿ 440 ಪ್ರಕರಣಗಳು ದಾಖಲಾಗಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. 377 ಪ್ರಕರಣಗಳು ಗುಣಮುಖರಾಗಿದ್ದು, 63 ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ.
ದುಬೈ : ದುಬೈನಲ್ಲಿ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದ್ದು, ಹಲವು ನಿರ್ಬಂಧಗಳನ್ನು ತೆರವುಗೊಳಿಸಿದೆ.
ಫಿನ್ ಲ್ಯಾಂಡ್ : ಕೊರೊನಾ ಸೋಂಕು ಪ್ರಕರಣಗಳು ಕಡಿಮೆ ಯಾಗಿದ್ದು ಸಹಜ ಸ್ಥಿತಿಯತ್ತ ಮರಳಿದೆ. ವಿದ್ಯಾರ್ಥಿಗಳ ಮಧ್ಯೆ ಅಂತರ ಕಾಪಾಡಿಕೊಂಡು ಶಾಲೆಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿದೆ.
ಜಪಾನ್ : ದೇಶದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಬಹುತೇಕ ಹಿಂಪಡೆಯಲಾಗಿದೆ. 47 ಪ್ರಾಂತ್ಯಗಳಲ್ಲಿ 39 ಪ್ರಾಂತ್ಯಗಳ ನಿರ್ಬಂಧಗಳನ್ನು ಹಿಂಪಡೆಯಲಾಗಿದ್ದು ಟೋಕಿಯೋ, ಒಸಾಕ ಮುಂತಾದ ಪ್ರಮುಖ ನಗರಗಳಲ್ಲಿ ಲಾಕ್ ಡೌನ್ ಮುಂದುವರಿದಿದೆ.
ದಕ್ಷಿಣ ಕೊರಿಯಾ : ದಕ್ಷಿಣ ಕೊರಿಯಾದಲ್ಲಿ ಎರಡನೇ ಹಂತದ ಕೊರೊನಾ ಅಲೆ ಪ್ರಾರಂಭವಾಗಿದೆ. 29 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದೆ.
ಇಟಲಿ: ಕೊರೊನಾದಿಂದ ತತ್ತರಿಸಿದ್ದ ಇಟಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸಲಾಗಿದೆ. ದೇಶಾದ್ಯಂತ ಹೋಟೆಲ್ ಗಳು, ಬಾರ್ ಗಳು, ಕೆಫೆಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಸೆಪ್ಟೆಂಬರ್ ನಿಂದ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಸ್ಪೇನ್ : ಜೂನ್ ತಿಂಗಳ ಅಂತ್ಯಕ್ಕೆ ವಿದೇಶಿಯರ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧರಿಸಿದೆ. ಪ್ರವಾಸೋದ್ಯಮವನ್ನೇ ಸ್ಪೇನ್ ಅವಲಂಬಿಸಿರುವುದರಿಂದ ಮತ್ತೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಿದೆ.
ಯೆಮನ್ : ಯೆಮನ್ ನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಸಂಭವಿಸಿದ್ದು, ಜಾಗತಿಕ ಸಮುದಾಯಗಳು ಯೆಮನ್ ಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದೆ.
ಶ್ರೀಲಂಕಾ : ದೇಶದ ಕೆಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಉಳಿದೆಡೆ ಮೇ 11ರಿಂದಲೇ ಲಾಕ್ ಡೌನ್ ತೆರವಾಗಿದೆ.








