ಲಾಕ್ ಡೌನ್ ಟೈಮ್ ನಲ್ಲಿ ಬಹುತೇಕರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ. ಇದಕ್ಕೆ ಕ್ರಿಕೆಟ್ ಆಟಗಾರರು ಹೊರತಲ್ಲ. ಈಗಾಗಲೇ ಕ್ರಿಕೆಟ್ ಆಟಗಾರರು ತಮ್ಮ ಗತ ಕಾಲದ ದಿನಗಳ ರಹಸ್ಯ ವಿಚಾರಗಳನ್ನು ಬಹಿರಂಗಗೊಳಿಸುತ್ತಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ, ಡ್ರೆಸಿಂಗ್ ರೂಂಗಳಲ್ಲಿ ಹೊರ ಪ್ರಪಂಚಕ್ಕೆ ಗೊತ್ತಾದಾದ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಏಕದಿನ ಕ್ರಿಕೆಟ್ ನಲ್ಲಿ ಮೊದಲ ದ್ವಿಶತಕ ದಾಖಲಿಸಿದ್ದ ಸಚಿನ್ ತೆಂಡುಲ್ಕರ್ 190 ರನ್ ಗಳಿಸುಷ್ಟರಲ್ಲಿ ಔಟಾಗಿದ್ದರು. ಆದ್ರೆ ಅಂಪೈರ್ ಪ್ರೇಕ್ಷಕರಿಗೆ ಹೆದರಿ ಔಟ್ ನೀಡಿರಲಿಲ್ಲ ಅಂತ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಆರೋಪಿಸಿದ್ದರು. ಆದ್ರೆ ಆ ಪಂದ್ಯದಲ್ಲಿ ಯಾವುದೇ ರೀತಿಯ ಅಂತಹ ಘಟನೆಗಳು ನಡೆದಿಲ್ಲ ಎಂಬ ಮಾತುಗಳನ್ನು ಕೆಲವು ಕ್ರಿಕೆಟ್ ಪಂಡಿತರು ಹೇಳಿದ್ದಾರೆ.
ಇದೀಗ ಸಚಿನ್ ತೆಂಡುಲ್ಕರ್ ಕೂಡ ಅಂತಹುದ್ದೇ ಒಂದು ಆರೋಪವನ್ನು ಮಾಡಿದ್ದಾರೆ. ಕೆಟ್ಟ ಅಂಪೈರಿಂಗ್‍ನಿಂದಾಗಿ ತನ್ನದೊಂದು ಅದ್ಭುತವಾದ ಇನ್ಸಿಂಗ್ಸ್ ನಿಂತು ಹೋಯ್ತು ಅಂತ ಹೇಳಿಕೊಂಡಿದ್ದಾರೆ, ಸಾಮಾನ್ಯವಾಗಿ ತೆಂಡುಲ್ಕರ್ ಇಂತಹ ವಿವಾದಗಳಿಂದ ದೂರವೇ ಉಳಿದುಕೊಳ್ಳುತ್ತಾರೆ. ಅಂಪೈರ್ ತೀರ್ಪಿಗೆ ತಲೆಬಾಗಿ ಪೆವಿಲಿಯನ್‍ನತ್ತ ನಡೆಯುತ್ತಿದ್ದ ಸಚಿನ್ ಯಾವತ್ತೂ ಕೂಡ ಮೈದಾನದಲ್ಲಿ ಅಶಿಸ್ತಿನಿಂದ ನಡೆದುಕೊಂಡಿರುವ ಘಟನೆಗಳಿಲ್ಲ. ಆದ್ರೆ ಈಗ ಹಳೆಯ ಪಂದ್ಯದ ಕೆಟ್ಟ ಅಂಪೈರಿಂಗ್ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ಅದು 1997ರ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ. ಆಗ ಭಾರತ ತಂಡಕ್ಕೆ ನಾಯಕನಾಗಿದ್ದವರು ಸಚಿನ್ ತೆಂಡುಲ್ಕರ್. ಆಗೆಲ್ಲಾ ಡಿಆರ್‍ಎಸ್ ಪದ್ಧತಿ ಇರಲಿಲ್ಲ. ಫೀಲ್ಡ್ ಅಂಪೈರಿಂಗ್ ತೀರ್ಮಾನವೇ ಅಂತಿಮವಾಗಿತ್ತು.
ಆ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರು. ಅದಕ್ಕೆ ತಕ್ಕಂತೆ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವೂ ಸಿಕ್ಕಿತ್ತು. ಆಂಬ್ರೋಸ್, ವಾಲ್ಸ್, ಫ್ರಾಂಕ್ಲೀನ್ ರೋಸ್, ಇಯಾನ್ ಬಿಷಪ್ ಸೇರಿದಂತೆ ವೇಗದ ಬೌಲರ್‍ಗಳ ವಿರುದ್ಧ ಆಕ್ರಮಣಕಾರಿ ಆಡಬೇಕು ಅಂತನೇ ನಿರ್ಧಾರ ಮಾಡಿದ್ದರು. ಇನಿಂಗ್ಸ್ ಆರಂಭಿಸಿದ್ದ ಸಚಿನ್ ಬರೀ ಬೌಂಡರಿಗಳಿಂದ ರನ್ ಗಳಿಸಲು ಮುಂದಾದ್ರು. ನೋಡ ನೋಡುತ್ತಿದ್ದಂತೆ 43 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ಸಚಿನ್ ಆಕರ್ಷಕ 44 ರನ್ ದಾಖಲಿಸಿದ್ದರು. ಆದ್ರೆ ಆಂಬ್ರೋಸ್ ಎಸೆತದಲ್ಲಿ ಚೆಂಡು ಬ್ಯಾಟ್‍ಗೆ ತಾಗಿಲ್ಲದಿದ್ರೂ ಅಂಪೈರ್ ಔಟ್ ಅಂತ ಬೆರಳಿತ್ತಿದ್ದರು. ಸಚಿನ್‍ಗೆ ಒಂದು ಕ್ಷಣ ಶಾಕ್ ಆದ್ರೂ ಅಂಪೈರ್ ತೀರ್ಮಾನಕ್ಕೆ ತಲೆಬಾಗಿ ಮೈದಾನದಿಂದ ಹೊರನಡೆದಿದ್ದರಂತೆ. ಸಚಿನ್ ಪ್ರಕಾರ ಇದು ಕೂಡ ನನ್ನ ಶ್ರೇಷ್ಠ ಇನಿಂಗ್ಸ್ ಗಳಲ್ಲಿ ಒಂದು ಪಂದ್ಯವಾಗಿತ್ತು.
ಈ ಪಂದ್ಯದಲ್ಲಿ ನಾನು ಅರ್ಧಶತಕ ಅಥವಾ ಶತಕ ದಾಖಲಿಸಲಿಲ್ಲ. ಆದ್ರೆ ಅತ್ಯುತ್ತಮ ಲಯದಲ್ಲಿದ್ದೆ ಅಂತ ಹೇಳಿರುವ ಸಚಿನ್ ಅಂಪೈರ್ ಕೆಟ್ಟ ತೀರ್ಮಾನವನ್ನು ಇದೀಗ ನೆನಪಿಸಿಕೊಂಡಿದ್ದಾರೆ. ಮಳೆಯ ಅಡಚಣೆ ನಡುವೆ ನಡೆದ ಈ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‍ಗಳಿಂದ ಸೋಲು ಅನುಭವಿಸಿತ್ತು. ಭಾರತ 179 ರನ್‍ಗಳಿಗೆ ಆಲೌಟ್ ಆಗಿತ್ತು. ವೆಸ್ಟ್ ಇಂಡೀಸ್ ಗೆಲ್ಲಲು 146 ರನ್‍ಗಳು ಬೇಕಿತ್ತು. ವಿಂಡಿಸ್ ತಂಡ 27.3 ಓವರ್‍ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತ್ತು. ಅಂದ ಹಾಗೇ ಸಚಿನ್ ಈ ರೀತಿ ತಮ್ಮ ಹಳೆದ ಫ್ಲ್ಯಾಶ್ ಬ್ಯಾಕ್ ದಿನಗಳನ್ನು ಮೆಲುಕು ಹಾಕುತ್ತಿರುವುದು ಹೊಸದೇನಲ್ಲ. 2010ರ ವಿಶ್ವಕಪ್ ನಲ್ಲಿ ಧೋನಿ ಬಡ್ತಿ ಪಡೆದು ಬ್ಯಾಟಿಂಗ್ ಮಾಡಿರೋದು, 2000ದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಕ್‍ಗ್ರಾಥ್ ಅವರ ಚಳಿ ಬಿಡಿಸಿದ್ದು, 2001ರಲ್ಲಿ ಅದೇ ಮೆಕ್ ಗ್ರಾಥ್ ಅವರನ್ನು ಕುಪಿತಗೊಳ್ಳುವಂತೆ ಮಾಡಿರುವ ಘಟನೆಗಳನ್ನು ಕೂಡ ಸಚಿನ್ ತೆಂಡುಲ್ಕರ್ ಈ ಲಾಕ್‍ಡೌನ್ ಟೈಮ್ ನಲ್ಲಿ ಹೇಳಿಕೊಂಡಿದ್ದಾರೆ.








