ಹೈಕೋರ್ಟ್ ಆವರಣದಲ್ಲಿ ಇ-ಸೇವಾ ಕೇಂದ್ರ ಪ್ರಾರಂಭ Saaksha Tv
ಬೆಂಗಳೂರು: ಹೈಕೋರ್ಟ್ನ ಪ್ರಧಾನ ಪೀಠದ ಆವರಣದಲ್ಲಿ ಬುಧವಾರ ಇ-ಸೇವಾ ಕೇಂದ್ರವನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಉದ್ಘಾಟಿಸಿದರು.
ಹೈಕೋರ್ಟ್ ಆವರಣದಲ್ಲಿರುವ ಪಾರ್ಕಿಂಗ್ ಸ್ಥಳದ ಸಮೀಪದಲ್ಲಿ ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಕೌಂಟರ್ಗಳು ಹಾಗೂ ವಿಡಿಯೋ ಕಾನ್ಫರೆನ್ಸ್ ಕ್ಯಾಬಿನ್ಗಳನ್ನು ನಿರ್ಮಿಸಲಾಗಿದೆ. ಈ ಸೇವಾ ಕೇಂದ್ರವು ಹೈಕೋರ್ಟ್ನ ಪ್ರಧಾನ ಪೀಠದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಕ್ಷೀದಾರರು ಹಾಗೂ ವಕೀಲರಿಗೆ ಅಗತ್ಯ ಮಾಹಿತಿ ಮತ್ತು ಸೇವೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.
ವಕೀಲರು ಹಾಗೂ ಕಕ್ಷೀದಾರರು ತಮ್ಮ ಪ್ರಕರಣಗಳ ಸ್ಥಿತಿಗತಿ, ಮುಂದಿನ ವಿಚಾರಣೆಯ ದಿನಾಂಕ ಸೇರಿದಂತೆ ಮತ್ತಿತರೆ ವಿವರಗಳನ್ನು ತಿಳಿದುಕೊಳ್ಳಬಹುದು. ಹಾಗೆಯೇ, ಇ-ಫೈಲಿಂಗ್ ಸುಲಭಗೊಳಿಸಲು ನೆರವು, ನ್ಯಾಯಾಲಯದ ಆದೇಶಗಳ ವಿದ್ಯುನ್ಮಾನ ಪ್ರತಿಗಳನ್ನು ಪಡೆಯಲು ಇ-ಸೇವಾ ಕೇಂದ್ರ ಉಪಯುಕ್ತವಾಗಿದೆ.









