ಬೆಂಗಳೂರು : ಲಾಕ್ ಡೌನ್ 4.0 ಜಾರಿ ಬೆನ್ನಲ್ಲೆ ರಾಜ್ಯ ಸರ್ಕಾರ ಬಿಎಂಟಿಸಿ, ಕೆಎಸ್ ಆರ್ ಟಿಸಿ, ಆಟೋ, ಕ್ಯಾಬ್ ಓಲಾಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಜನರು ಮಾತ್ರ ಸಾರ್ವಜನಿಕ ಸಾರಿಗೆ ಉಪಯೋಗಿಸಲು ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ಕಾಟಕ್ಕೂ ಮುನ್ನ ಸಾಮಾನ್ಯವಾಗಿ ಬಸ್ಸುಗಳಿಗಾಗಿ ಜನ ಕಾಯೋದನ್ನು ನಾವು ನೋಡಿದ್ವಿ. ಆದರೆ ಈಗ ಬಸ್ಸುಗಳೇ ಜನರಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ವೈರಸ್ ಮಧ್ಯೆಯೂ ಜನರ ಜೀವನ ಎಂದಿನಂತಾಗಲಿ ಎಂದು ರಾಜ್ಯ ಸರ್ಕಾರ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬಿಎಂಟಿಸಿ, ಕೆಎಸ್ ಆರ್ ಟಿಸಿ, ಆಟೋ, ಕ್ಯಾಬ್ ಓಲಾ ಸೇರಿದಂತೆ ಬಹುತೇಕ ಎಲ್ಲಾ ಸಾರಿಗೆಯನ್ನು ಆರಂಭ ಮಾಡಿದೆ. ಆದ್ರೆ ಭಾರೀ ಕುತೂಹಲದಿಂದ ಸಾರಿಗೆ ಆರಂಭ ಮಾಡಿದ ರಾಜ್ಯ ಸರ್ಕಾರಕ್ಕೆ ಸಿಕ್ಕಿದ್ದು ಮಾತ್ರ ಭಾರೀ ನಿರಾಸೆ.
ನಿನ್ನೆ ಬೆಳಗ್ಗಿನ ಜಾವ ಒಂದಷ್ಟು ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ಬಂದಿದ್ದು ಬಿಟ್ರೆ, ಸಂಜೆವರೆಗೆ ಆಟೋ, ಒಲಾ, ಊಬರ್, ಬಿಎಂಟಿಸಿ, ಕೆಎಸ್ ಆರ್ ಟಿಸಿ ಖಾಲಿ ಖಾಲಿಯಾಗಿದ್ದವು. ಇದರಿಂದಾಗಿ ಬಸ್ ಗಳ ಸಂಚಾರವನ್ನು 2 ಗಂಟೆಗಳ ಮುಂಚೆಯೇ ನಿಲ್ಲಿಸಲಾಗಿತ್ತು.ಇಂದೂ ಸಹ ನಿನ್ನೆಯ ರೀತಿಯಲ್ಲಿ ಜನರು ಸರ್ಕಾರಿ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಮ್ಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರೆಡ್ ಝೋನ್ ಗಳಿಂದ ಇಲ್ಲಿಯವರೆಗೂ ಸೋಂಕು ಕಾಣಿಸಿಕೊಳ್ಳದ ಗ್ರೀನ್ ಝೋನ್ ಗಳ ವರೆಗೆ ಕೊರೊನಾ ವೈರಸ್ ಶರವೇಗದಲ್ಲಿ ಹರಡಿಕೊಳ್ಳುತ್ತಿದೆ. ಇದರಿಂದ ಭಯಭೀತರಾಗಿರುವ ಜನರು ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ವಿಚಾರ ಅಂದ್ರೆ ಲಾಕ್ ಡೌನ್ ಸಮಯದಲ್ಲಿ ಬಹುತೇಕರು ಅನಿವಾರ್ಯವಾಗಿ ಸ್ವಂತ ವಾಹನಗಳು ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಹುಡುಕಿ ಕೊಂಡಿದ್ದರು. ಈಗಲೂ ಸ್ವಂತ ವಾಹನಗಳಲ್ಲೇ ಪ್ರಯಾಣಿಸುತ್ತಿರಬಹುದು. ಅದರ ಜೊತೆಗೆ ಪ್ರಯಾಣ ಮಾಡೋ ಜನರೆಲ್ಲಾ ಬಹುತೇಕರು ಕೂಲಿ ಕಾರ್ಮಿಕರು ಆಗಿರೋದ್ರಿಂದ ಅವರೆಲ್ಲರು ತಮ್ಮ ತಮ್ಮ ಊರುಗಳಿಗೆ ವಾಪಸ್ಸು ಆಗಿದ್ದಾರೆ. ಹೀಗಾಗಿ ಜನಸಂದಣಿ ಕಡಿಮೆ ಇದೆ ಎನ್ನಲಾಗಿದೆ.
ಇನ್ನು ಸಾರಿಗೆ ವ್ಯವಸ್ಥೆ ಓಪನ್ ಆಗಿ ಇಂದು ಎರಡನೇ ದಿನವಾಗಿದ್ದು, ನಿಧಾನವಾಗಿ ಸಂಚಾರ ಹಿಂದಿನ ಸ್ಥಿತಿಗೆ ಬರುತ್ತೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.








