ಅಹಮದಾಬಾದ್ : ಕೊರೊನಾ ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರು ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಇದರ ಮಧ್ಯೆ ಲಾಕ್ ಡೌನ್ ಅವಧಿಯಲ್ಲಿ ವೇತನ ಪಾವತಿಸದಿದ್ದಕ್ಕಾಗಿ ಮತ್ತು ಮಾರ್ಚ್ 28 ರಿಂದ ಮನೆಗೆ ಹೋಗಲು ಅನುಮತಿ ನೀಡದ ಕಾರಣದಿಂದಾಗಿ ಅಹಮದಾಬಾದ್ ನ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಕ್ಯಾಂಪಸ್ ನಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರು ನಿರ್ದೇಶಕ ಪ್ರೊ. ಎರ್ರೋಲ್ ಡಿಸೋಜಾ ಅವರಿಗೆ ಕಾನೂನು ನೋಟಿಸ್ ನೀಡಿದ್ದಾರೆ.
ಮೊನ್ನೆ ಇದೇ ವಲಸೆ ಕಾರ್ಮಿಕರು ಊರಿಗೆ ತೆರಳಲು ಅವಕಾಶ ನೀಡುವಂತೆ ಆಗ್ರಹಿಸಿ ಐಐಎಂಎ ಕ್ಯಾಂಪಸ್ ಬಳಿಯ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ವಿರುದ್ಧ ಕಲ್ಲು ತೂರಾಟ ನಡೆಸಿದ್ದರು. ಇದಾದ ಒಂದು ದಿನದ ಬಳಿಕ ನಿರ್ದೇಶಕ ಪ್ರೊ. ಎರ್ರೋಲ್ ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಕಾರ್ಮಿಕರ ಪರ ವಕೀಲ ಹೇಳಿದ್ದೇನು.?
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕರ ಪರ ವಕೀಲ ಆನಂದ್ ಯಾಗ್ನಿಕ್, ಕಾರ್ಮಿಕರ ವೇತನದ ವಿಷಯದಲ್ಲಿ ಸ್ಪಷ್ಟನೆ ಕೋರಿ ಮತ್ತು ಅವರನ್ನು ಮನೆಗೆ ಹೋಗದಂತೆ ತಡೆದಿದ್ದಕ್ಕಾಗಿ 1979 ರ ಅಂತರಾಜ್ಯ ವಲಸೆ ಕಾರ್ಮಿಕರ ಕಾಯ್ದೆಯಡಿ ಐಐಎಂ-ಎ ನಿರ್ದೇಶಕರಿಗೆ ಕಾನೂನು ನೋಟಿಸ್ ನೀಡಲಾಗಿದೆ. ಇಲ್ಲಿ ಈ ಸಮಸ್ಯೆ ಇತ್ಯರ್ಥವಾಗದಿದ್ದರೆ ನಾವು ಹೈಕೋರ್ಟ್ ಗೆ ಹೋಗುತ್ತೇವೆ ಎಂದಿದ್ದಾರೆ.
ಅಲ್ಲದೆ, ಕಲ್ಲು ತೂರಾಟದ ಬಳಿಕ ಬಂಧನಕ್ಕೊಳಗಾದ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ 35 ವಲಸೆ ಕಾರ್ಮಿಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು, ಇಲ್ಲಿಯವರೆಗಿನ ಬಾಕಿಯಿರುವ ವೇತನ ಪಾವತಿಸಬೇಕು. ಅವರು ಊರಿಗೆ ಮರಳುವ ಬಗ್ಗೆ ಖಚಿತಪಡಿಸಬೇಕು, ಉಚಿತವಾಗಿ ಮರಳುವ ವ್ಯವಸ್ಥೆಯನ್ನು ಮಾಡಬೇಕು ಎಂದು ಐಐಎಂ-ಎ ನಿರ್ದೇಶಕ ಮತ್ತು ಗುತ್ತಿಗೆದಾರರನ್ನು ಒತ್ತಾಯಿಸಿದ್ದಾರೆ.








