ಬೆಂಗಳೂರು : ಎಂತಹ ಪರಿಸ್ಥಿತಿಯೇ ಬಂದರೂ ಬಂಡೆಯಂತೆ ಗಟ್ಟಿಯಾಗಿ ಎದೆಯುಬ್ಬಿಸಿ ನಿಲ್ಲುವ ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಅವರು ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಕಿದ ಅವಾಜ್ ಗೆ ಅವಕ್ಕಾದ ಘಟನೆ ಜರುಗಿತು.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಹಲವು ತೀರ್ಮಾನಗಳನ್ನು ವಿರೋಧಿಸಿ ಇಂದು ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸೌಧ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಗೆ ಮುಂದಾಗಿದ್ದರು.
ಆದ್ರೆ ಕಾಂಗ್ರೆಸ್ ನಾಯಕರು ಪ್ರತಿಮೆ ಹೋಗುತ್ತಿದ್ದಂತೆ ಅವರನ್ನು ಅಲ್ಲಿ ಸ್ವಾಗತಿಸಿದ್ದು, ಭದ್ರತಾ ದೃಷ್ಟಿಯಿಂದ ಯಾವುದೇ ಪ್ರತಿಭಟನೆಯನ್ನು ಮಾಡಲು ಅನುಮತಿಯನ್ನು ನೀಡಿಲ್ಲ ಎಂದು ವಿಧಾನಸೌಧ ಪೊಲೀಸರು ಅಂಟಿಸಿದ್ದ ಸೂಚನಾ ಪತ್ರ. ಇದರಿಂದ ಕೆರಳಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸರ್ಕಾರದ ಗುಡುಗುತ್ತಾ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ವಿಧಾನಸೌಧದಲ್ಲಿ ಶಾಸಕಾಂಗ ಪಕ್ಷದ ಸಭೆ ಮಾಡಲೂ ನಮಗೆ ಅವಕಾಶ ಕೊಟ್ಟಿಲ್ಲ. ಈಗ ಪ್ರತಿಭಟನೆ ಮಾಡಲೂ ಅವಕಾಶವಿಲ್ಲವೇ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಬೆಂಕಿಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಬೋಗಸ್ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ರಾಜ್ಯ ಸರ್ಕಾರ ಲಾಕ್‌ಡೌನ್ ಸಂದರ್ಭದಲ್ಲಿ ಜನರ ಹಿತ ಕಾಯುವ ಬದಲು ಜನ ವಿರೋಧಿಯಾಗಿ ನಡೆದುಕೊಂಡಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ಬೋಗಸ್ ಪ್ಯಾಕೇಜ್. ಪ್ಯಾಕೇಜ್‌ನ ಒಂದು ರೂಪಾಯಿ ಕೂಡ ಯಾರಿಗೂ ತಲುಪಿಲ್ಲ. ಒಬ್ಬ ಫಲಾನುಭವಿಗೂ ಒಂದು ಸಾವಿರ ರೂ. ಕೊಟ್ಟಿಲ್ಲ ಎಂದು ಆರೋಪಿಸಿದರು. ಇನ್ನು ಬಜೆಟ್‌ನಲ್ಲಿರುವ ಯೋಜನೆಗಳನ್ನು ತಿರುಚಿ ಶಹಬ್ಬಾಶ್‌ಗಿರಿ ತೆಗೆದುಕೊಳ್ಳುವ ಪ್ರಯತ್ನವನ್ನು ಮೋದಿ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಜನಹಿತ ಕಾಪಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಇದಾದ ಬಳಿಕ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಘೋಷಣೆ ವಿರುದ್ಧ ಸಿದ್ದರಾಮಯ್ಯ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಅವರನ್ನು ಅನುಸರಿಸಿ ಅಲ್ಲಿದ್ದ ಕೆಲ ಕಾಂಗ್ರೆಸ್ ನಾಯಕರು ತಪ್ಪು ಘೋಷಣೆ ಹಾಕಿದರು. ಇದರಿಂದ ಮತ್ತಷ್ಟು ಕೋಪಗೊಂಡ ಸಿದ್ದರಾಮಯ್ಯ ಮುಖಂಡರನ್ನು ಜೋರಾಗಿಯೆ ಗದರಿಸಿದರು. ಈ ವೇಳೆ ಸಿದ್ದರಾಮಯ್ಯ ಅವರ ಆಕ್ರೋಶ ಎಷ್ಟರ ಮಟ್ಟಿಗೆ ಇತ್ತು ಅಂದರೆ ಪಕ್ಕದಲ್ಲಿದ್ದ ಗಟ್ಟಿ ವ್ಯಕ್ತಿತ್ವದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಒಂದು ಕ್ಷಣ ದಂಗಾದರು.
ಇನ್ನು ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೆ ಜೆ ಜಾರ್ಜ್, ಆಂಜನೇಯ, ಬಿ. ಕೆ. ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ, ಎಸ್ ಆರ್ ಪಾಟೀಲ್, ಐವಾನ್ ಡಿಸೋಜ, ಸತೀಶ್ ಜಾರಕಿಹೊಳಿ ಸೇರಿದಂತೆ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.








