ಕೋಲಾರ : ಕೆರೆಗಳ ಒತ್ತುವರಿ ತೆರವಿಗೆ ಮನವಿ ಮಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಸದಸ್ಯರ ವಿರುದ್ಧ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದಾರೆ.
ಕೋಲಾರ ತಾಲೂಕಿನ ಎಸ್. ಅಗ್ರಹಾರದಲ್ಲಿ ಈ ಘಟನೆ ನಡೆದಿದ್ದು, ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ರಾಜ್ಯ ಸಂಘ ಮತ್ತು ಹಸಿರು ಸೇನೆ ಸದಸ್ಯರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಎಸ್.ಅಗ್ರಹಾರ ಗ್ರಾಮಕ್ಕೆ ಕೆರೆ ಪರಿಶೀಲಿಸಲು ಸಚಿವ ಮಾಧುಸ್ವಾಮಿ ಆಗಮಿಸಿದ್ದರು. ಈ ವೇಳೆ ಅವರಿಗೆ ರೈತ ಸಂಘ ಮತ್ತು ಹಸಿರು ಸೇನೆಯ ಮಹಿಳಾ ಸದಸ್ಯರು ಕೆರೆಗಳ ಒತ್ತುವರಿ ತೆರವು ಮಾಡುವಂತೆ ಮನವಿ ಸಲ್ಲಿಸಿ ಚರ್ಚೆಗೆ ಮುಂದಾದರು. ಈ ವೇಳೆ ಸಚಿವರು, ‘ಹೇ ರಾಸ್ಕಲ್, ಮುಚ್ಚು ಬಾಯಿ’ ಎಂದು ಗದರಿದರು.
ಇದರಿಂದ ಕೆರಳಿದ ಮಹಿಳಾ ಸದಸ್ಯರು, ‘ಏಕೆ ಆ ರೀತಿ ಮಾತನಾಡುತ್ತೀರಿ’ ಎಂದು ಸಚಿವರ ವಿರುದ್ಧ ತಿರುಗಿಬಿದ್ದರು. ಇದರಿಂದ ಮತ್ತಷ್ಟು ಕೆಂಡಾಮಂಡಲರಾದ ಸಚಿವರು, ಸದಸ್ಯರನ್ನು ದೂರ ಕಳುಹಿಸುವಂತೆ ಪೊಲೀಸರಿಗೆ ಆದೇಶಿಸಿ ಅಧಿಕಾರದ ದರ್ಪ ತೋರಿದರು.
ಈ ವೇಳೆ ಸಚಿವರ ಆದೇಶ ಪಾಲನೆಗೆ ಮುಂದಾದ ಪೊಲೀಸರ ಜೊತೆಗೂ ಸದಸ್ಯರು ವಾಗ್ವಾದಕ್ಕಿಳಿದರು. ಇದರಿಂದ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಯಿತು. ಬಳಿಕ ಪೊಲೀಸರು ಸದಸ್ಯರನ್ನು ಎಳೆದೊಯ್ದರು.