ಕೊಲ್ಕತ್ತಾ, ಮೇ 20: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿದ್ದ ಅಂಫಾನ್ ಚಂಡಮಾರುತ ಬುಧವಾರ ಮಧ್ಯಾಹ್ನ 2.30ರ ವೇಳೆಗೆ ಪಶ್ಚಿಮ ಬಂಗಾಳ ಕರಾವಳಿ ಪ್ರದೇಶವನ್ನು ಅಪ್ಪಳಿಸಿದೆ. ರಣಭೀಕರ ಸ್ವರೂಪ ಪಡೆದುಕೊಂಡಿರುವ ಅಂಫಾನ್ ಚಂಡಮಾರುತ
ಒಡಿಶಾವನ್ನು ಮೊದಲು ಪ್ರವೇಶಿಸಿದ ಬಳಿಕ ಪಶ್ಚಿಮ ಬಂಗಾಳದತ್ತ ಧಾವಿಸಿದೆ. ಬುಧವಾರ ಸಂಜೆಯ ವೇಳೆಗೆ ಭಾರಿ ಪ್ರಮಾಣದಲ್ಲಿ ಮಳೆಯಾಗುತಲಿದ್ದು, ಹವಾಮಾನ ಇಲಾಖೆಯು ಈ ಮೊದಲೇ ಮುನ್ಸೂಚನೆ ನೀಡಿತ್ತು. ಈಗಾಗಲೇ ಆರು ಲಕ್ಷಕ್ಕೂ ಹೆಚ್ಚು ಜನರನ್ನು ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಸುರಕ್ಷಿತ ತಾಣಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 41 ತಂಡಗಳು, ಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ಕಾವಲು ಪಡೆಯ ತುಕಡಿಗಳು
ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.
ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತವುಂಟಾಗಿದ್ದು, ಗಂಟೆಗೆ ಸುಮಾರು 200 ಕೀ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಹಲವೆಡೆ ರಸ್ತೆಗಳ ಮೇಲೆ ಬಿದ್ದಿರುವ ಮರಗಳಿಂದಾಗಿ ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿದೆ. ಹಲವು ಪ್ರದೇಶಗಳಲ್ಲಿ ಮಣ್ಣು ಕುಸಿತವುಂಟಾಗಿದೆ.
ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸಂಚರಿಸಬೇಕಾಗಿದ್ದ ಶ್ರಮಿಕ ವಿಶೇಷ ರೈಲನ್ನು ಕೇಂದ್ರ ಸರಕಾರ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯು ಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ ಕರಾವಳಿ ತೀರದತ್ತ ಮುಂದುವರಿದಿದ್ದು, ಬಿರುಗಾಳಿ ಸಹಿತ ಮಳೆ ಜೋರಾಗಿದೆ. ಬಿರುಸಾದ ಗಾಳಿಯೊಂದಿಗೆ ಗಂಟೆಗೆ ಸುಮಾರು 200 ಕಿ.ಮೀ ವೇಗದೊಂದಿಗೆ ಚಂಡಮಾರುತ ಧಾವಿಸುತ್ತಿದೆ. ಅಂಫಾನ್ ಚಂಡಮಾರುತದ ವೇಗ ಗಂಟೆಗೆ 155 – 166 ಕಿ.ಮೀ.ಇರಲಿದ್ದು, ಕ್ರಮೇಣ 185 ಕಿ.ಮೀ. ಗಳಿಗೆ ಹೆಚ್ಚಾಗಲಿದೆ. 10ರಿಂದ 15 ಸೆ. ಮೀ. ಗಳಷ್ಟು ಮಳೆ ಸುರಿಯ ಬಹುದು ಮತ್ತು ಹಲವೆಡೆ ಭೂ ಕುಸಿತ ಕೂಡಾ ಉಂಟಾಗ ಬಹುದು ಎಂದು ಅಂದಾಜಿಸಲಾಗಿತ್ತು. ಅಂಫಾನ್ ಚಂಡಮಾರುತ ಮಣ್ಣು ಕುಸಿತ, ವಿದ್ಯುತ್ ತಂತಿ ಕಡಿತ, ಮರಗಳ ಉರುಳುವಿಕೆ, ಗುಡಿಸಲು ನಾಶ ಸೇರಿದಂತೆ ಭಾರಿ ಅನಾಹುತವನ್ನುಂಟು ಮಾಡಲಿದೆ ಎಂದು ಮೊದಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜಗಸ್ತಿಪುರ, ಕೇಂದ್ರಪಾರಾ, ಭದ್ರಕ್, ಜಾಜ್ ಪುರ, ಬಾಲಾಸೋರ್ ಗಳಲ್ಲಿ ಅಂಫಾನ್ ಚಂಡಮಾರುತ ಸಾಕಷ್ಟು ಹಾನಿ ಉಂಟು ಮಾಡಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಆ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದ್ದು, 12 ಲಕ್ಷ ಜನರನ್ನು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿರುವ ಚಂಡ ಮಾರುತ ಈಘ ಬಾಂಗ್ಲಾದೇಶ ಹತಿಯಾ ಕಡಲ ತೀರದತ್ತ ಮುಖ ಮಾಡಲಿದೆ.
ಹಿಂದೆ 2019 ರಲ್ಲಿ ಪಶ್ಚಿಮ ಬಂಗಾಳವನ್ನು ಕಂಗೆಡಿಸಿದ ಚಂಡ ಮಾರುತ ಕ್ಕಿಂತ ಅಂಫಾನ್ ಚಂಡಮಾರುತ ಭೀಕರವಾಗಿ ಇರಲಿದೆ ಎಂದು ಈ ಮೊದಲೇ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಡಿಶಾದ ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಂಡಮಾರುತ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.
ಈಗಾಗಲೇ ಸುಮಾರು 12 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದ್ದು, ಅವರಿಗೆ ಶಾಲಾ ಕಾಲೇಜುಗಳಲ್ಲಿ ಆಶ್ರಯ ನೀಡಲಾಗಿದೆ.








