ಉಡುಪಿ ಜಿಲ್ಲಾ ಶಾಲೆ-ಕಾಲೇಜು ಸುತ್ತಮುತ್ತ 144 ಸೆಕ್ಷನ್ ಜಾರಿ Saaksha Tv
ಉಡುಪಿ: ಹಿಜಾಬ್ ವಿವಾದದ ನಡುವೆಯೇ ಉಡುಪಿ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಸುತ್ತಮುತ್ತ ಫೆಬ್ರವರಿ 14 ರಿಂದ ಫೆಬ್ರವರಿ 19 ರವರೆಗೆ ಸೆಕ್ಷನ್ 144 ಜಾರಿಗೊಳಿಸಿದೆ.
ಉಡುಪಿ ಜಿಲ್ಲಾಡಳಿತದ ಈ ಆದೇಶವು ಫೆ.14ರ ಬೆಳಗ್ಗೆ 6ರಿಂದ ಫೆ.19ರ ಸಂಜೆ 6ರವರೆಗೆ ಅನ್ವಯವಾಗಲಿದೆ. ಆದೇಶದ ಪ್ರಕಾರ, ಪ್ರೌಢಶಾಲೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ.
ಸೋಮವಾರದಿಂದ ಶಾಲೆಗಳು ಪುನರಾರಂಭವಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸೆಕ್ಷನ್ 144 ಜಾರಿಯಾದ ನಂತರ, ಪ್ರತಿಭಟನೆಗಳು ಮತ್ತು ರ್ಯಾಲಿಗಳಿಗೆ ನಿಷೇಧವಿದೆ. ಘೋಷಣೆಗಳನ್ನು ಕೊಗುವುದು, ಹಾಡುಗಳನ್ನು ಹಾಡುವುದು ಅಥವಾ ಭಾಷಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಅಲ್ಲದೇ ಪ್ರತಿಕೃತಿ ದಹನ, ಪಟಾಕಿ ಸುಡುವುದು, ಆಯುಧಗಳು ಮತ್ತು ಕಲ್ಲುಗಳನ್ನು ಒಯ್ಯುವುದು ಅಥವಾ ತೋರುವುದು, ಸಾರ್ವಜನಿಕವಾಗಿ ಸಿಹಿ ಹಂಚುವುದು ಮತ್ತು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ರೀತಿಯ ಅಸಭ್ಯ ವರ್ತನೆಯನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.