ನವದೆಹಲಿ : ಲಾಕ್ ಡೌನ್ ಸಡಿಲಿಕೆ ಬಳಿಕ ದೇಶದಲ್ಲಿ ಕೊರೊನಾಸುರ ತುಸು ಜೋರಾಗಿ ರಣಕೇಕೆ ಹಾಕುತ್ತಾ ಮರಣ ಮೃದಂಗ ಬಾರಿಸುತ್ತಿದ್ದಾನೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾ ಹಾವಳಿ ಮತ್ತಷ್ಟು ಹೆಚ್ಚಳವಾಗಿದ್ದು, ಬರೋಬ್ಬರಿ 5,609 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಮಹಾಮಾರಿ ಕೊರೊನಾ ವೈರಸ್ ಗೆ 132 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ಈ ವರೆಗೆ ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 3435ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 1,12,359ಕ್ಕೆ ತಲುಪಿದೆ. 1,12,359 ಮಂದಿ ಸೋಂಕಿತರ ಪೈಕಿ 48,735 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಗಳಿಂದ ಬಿಡುಗಡೆಗೊಂಡು ಮನೆ ಸೇರಿದ್ದಾರೆ. ಇನ್ನೂ 63624 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.
ಸತತ 4ನೇ ದಿನವೂ “ಮಹಾ” ಸ್ಫೋಟ
ಇನ್ನು ಸತತ 4ನೇ ದಿನವೂ ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, 4ನೇ ದಿನವೂ 2000ಕ್ಕಿಂತ ಹೆಚ್ಚಿನ ಕೇಸು ಬೆಳಕಿಗೆ ಬಂದಿದೆ. ಬುಧವಾರ ರಾಜ್ಯದಲ್ಲಿ 2250 ಹೊಸ ಪ್ರಕರಣದೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 39297ಕ್ಕೆ ತಲುಪಿದೆ. ಜೊತೆಗೆ 65 ಜನ ಒಂದೇ ದಿನ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನಸಂಖ್ಯೆ 1390ಕ್ಕೆ ಮುಟ್ಟಿದೆ.
ಉಳಿದಂತೆ ಕಳೆದ 24 ಗಂಟೆಯಲ್ಲಿ ತಮಿಳುನಾಡಿನಲ್ಲಿ 743 ಕೇಸುಗಳು ಪತ್ತೆಯಾಗಿದ್ದು, 3 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 534 ಪ್ರಕರಣಗಳು ದೃಢಪಟ್ಟಿದ್ದು, 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಗುಜರಾತ್ ರಾಜ್ಯದಲ್ಲಿ 398 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, 30 ಮಂದಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ 270 ಸೋಂಕು ಪ್ರಕರಣಗಳು ದಾಖಲಾಗಿದ್ದರೇ 9 ಮಂದಿ ಸಾವನ್ನಪ್ಪಿದ್ದಾರೆ.








