ಉತ್ತರ ಪ್ರದೇಶದಲ್ಲಿ ಇಂದು 2ನೇ ಹಂತದ ಚುನಾವಣೆ Saaksha Tv
ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು ಒಟ್ಟು 55 ಸ್ಥಾನಗಳಲ್ಲಿ ಮತದಾನ ನಡೆಯಲಿದೆ.
ಉತ್ತರ ಪ್ರದೇಶದ ಎರಡನೇ ಹಂತದಲ್ಲಿ ಒಂಬತ್ತು ಜಿಲ್ಲೆಗಳಲ್ಲಿ ಒಟ್ಟು 55 ಅಸೆಂಬ್ಲಿ ಸ್ಥಾನಗಳು – ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಮ್‌ಪುರ್, ಅಮ್ರೋಹಾ, ಬುದೌನ್, ಬರೇಲಿ ಮತ್ತು ಷಹಜಹಾನ್‌ಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಎರಡನೇ ಹಂತದಲ್ಲಿ 586 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮತದಾನವು ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ
ಬರೇಲ್ವಿ ಮತ್ತು ದಿಯೋಬಂದ್ ಪಂಗಡಗಳ ಧಾರ್ಮಿಕ ಮುಖಂಡರಿಂದ ಪ್ರಭಾವಿತವಾಗಿರುವ ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. ಆದಾಗ್ಯೂ, ಈ ಹಂತವನ್ನು ಮೋದಿ ಸರ್ಕಾರಕ್ಕೆ ಅಗ್ನಿಪರೀಕ್ಷೆ ಎಂದು ಪರಿಗಣಿಸಲಾಗಿದೆ.
2017ರಲ್ಲಿ ಒಟ್ಟು 55 ಸ್ಥಾನಗಳಲ್ಲಿ ಬಿಜೆಪಿ 38 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ 15 ಮತ್ತು ಕಾಂಗ್ರೆಸ್ 2ರಲ್ಲಿ ಗೆಲುವು ಸಾಧಿಸಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು.
ಚುನಾವಣಾ ದಿನದಂದು 60,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಸುಮಾರು 800 ಅರೆಸೇನಾ ಪಡೆ ತುಕಡಿಗಳನ್ನೂ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳಿಸಲಾಗಿದೆ. 12,538 ರಲ್ಲಿ 4,917 ಮತಗಟ್ಟೆಗಳನ್ನು “ನಿರ್ಣಾಯಕ” ಎಂದು ಪರಿಗಣಿಸಲಾಗಿದೆ. ನಗೀನಾ, ಧಾಂಪುರ್, ಬಿಜ್ನೋರ್, ಅಸ್ಮೋಲಿ, ಸಂಭಾಲ್, ದಿಯೋಬಂದ್, ರಾಂಪುರ್ ಮಣಿಹರನ್ ಮತ್ತು ಗಂಗೋಹ್ ಎಂಟು ವಿಧಾನಸಭಾ ಕ್ಷೇತ್ರಗಳನ್ನು ‘ಸೂಕ್ಷ್ಮ’ ವಿಭಾಗದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.