ಮಂಗಳೂರು, ಮೇ 21 : ಅಂದು ಮೇ 22, 2010, ಸಮಯ ಸುಮಾರು ಆರು ಗಂಟೆ.. ದುಬೈನಿಂದ 166 ಮಂದಿ ಕರಾವಳಿಗರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ, ಕಡಲತಡಿ ಮಂಗಳೂರು ತಲುಪಿತ್ತು. ಬೆಳಗಿನ ಸವಿ ನಿದ್ದೆಯಲ್ಲಿದ್ದ ಕರಾವಳಿಗರು, ತಾಯ್ನಾಡಿಗೆ ಬಂದ ಖುಷಿಯಲ್ಲಿದ್ದರು. ನಮಗಾಗಿ ಕಾಯುತ್ತಿರುವ ಕುಟುಂಬ ವರ್ಗ, ಸ್ನೇಹಿತರನ್ನು ನೆನೆದು ಅವರನ್ನು ನೋಡುವ ತವಕದಲ್ಲಿದ್ದರು. ದುಬೈನಿಂದ ರಾತ್ರಿ 02. 36ಕ್ಕೆ ಹೊರಟ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಯಲ್ಲಿ ಇಳಿಯಲು ನೋಡುತ್ತಿತ್ತು, ಎಲ್ಲಾ ಸುರಕ್ಷಾ ಸಂಕೇತಗಳನ್ನು ವಿನಿಮಯ ಮಾಡುತ್ತಾ ರನ್ ವೇ ಬಂದಿಳಿದು ನಿಲ್ಲಲು ನೋಡುತ್ತಿದ್ದಂತೆ… ಅದೇನು ಆಯಿತೋ ಗೊತ್ತಿಲ್ಲ, ರನ್ ವೇ ಯಲ್ಲಿ ನಿಲ್ಲದ ವಿಮಾನ ಮುಂದಕ್ಕೆ ಚಲಿಸುತ್ತಾ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಅದನ್ನು ತುಂಡರಿಸಿ, ಆಳದ ಕಣಿವೆಗೆ ಬಿದ್ದು ಬಿಟ್ಟಿತು. ಹೊರಗೆ, ವಿಮಾನದಿಂದ ಇಳಿದು ಬರುವ ತಮ್ಮವರಿಗಾಗಿ ಕಾಯುತ್ತಾ ಕುಳಿತಿದ್ದ ಕುಟುಂಬ ವರ್ಗ, ಸ್ನೇಹಿತರ ವರ್ಗಕ್ಕೆ ದೊಡ್ಡದಾದ ಸದ್ದೊಂದು ಅಪಾಯ ನಡೆದಿರುವ ಮುನ್ಸೂಚನೆ ನೀಡಿತು.
ಇತ್ತ ದೊಡ್ಡ ಸದ್ದಿನೊಂದಿಗೆ ಕಣಿವೆಗೆ ಬಿದ್ದ ವಿಮಾನವು ಧಗ ಧಗನೇ ಹೊತ್ತಿ ಉರಿಯ ತೊಡಗಿತು. ನೋಡ ನೋಡುತ್ತಿದ್ದಂತೆ 158 ಮಂದಿಯ ಜೀವವನ್ನು ಈ ವಿಮಾನ ದುರಂತ ಬಲಿ ತೆಗೆದು ಕೊಂಡಿತು. 22 ಶವಗಳು ಸುಟ್ಟು ಕರಕಲಾದ ಕಾರಣ ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ವಿಮಾನ ನಿಲ್ದಾಣಕ್ಕೆ ತಮ್ಮವರನ್ನು ಕರೆದೊಯ್ಯಲು ಬಂದಿದ್ದವರು ಅವರ ಹೆಣದೊಂದಿಗೆ ಮರಳುವಂತಾಯಿತು. ಈ ವಿಮಾನ ದುರಂತದಲ್ಲಿ ಪೈಲಟ್, ಸಿಬ್ಬಂದಿಗಳು ಸೇರಿ 158 ಮಂದಿ ಮೃತಪಟ್ಟಿದ್ದು, 135 ಮಂದಿ ವಯಸ್ಕರು, 6 ಮಂದಿ ವಿಮಾನ ಸಿಬ್ಬಂದಿಗಳು, 19 ಮಂದಿ ಮಕ್ಕಳು ಮತ್ತು 4 ಶಿಶುಗಳು ಸೇರಿ 166 ಮಂದಿ ಪ್ರಯಾಣಿಸುತ್ತಿದ್ದರು.
ದುರಂತಕ್ಕೀಡಾದ ವಿಮಾನ, ಅಮೆರಿಕದ ಬೋಯಿಂಗ್ ಕಂಪೆನಿಯ 737-800 ಎರಡು ಅವಳಿ ಎಂಜಿನ್ ಗಳ ಅತ್ಯಾಧುನಿಕ ತಂತ್ರಜ್ಞಾನದ ವಿಮಾನ. ಈ ವಿಮಾನವು ಪ್ರತಿದಿನ ಮಂಗಳೂರಿನಿಂದ ದುಬೈಗೆ ಮತ್ತು ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತದೆ. ಅಂದು ನಡೆದ ಮಂಗಳೂರು ವಿಮಾನ ದುರ್ಘಟನೆಗೆ ಕಾರಣ ಸಹ ಪೈಲಟ್ ನ ಸಲಹೆಗಳನ್ನು ಪಾಲಿಸದ ಮುಖ್ಯ ಪೈಲಟ್ ನ ನಿರ್ಲಕ್ಷ್ಯ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ. ಮುಖ್ಯ ಪೈಲಟ್ ಸರ್ಬಿಯಾದ ಕ್ಯಾಪ್ಟನ್ ಜಟ್ಕೋ ಗೆ ವಿಮಾನವನ್ನು ಮತ್ತೊಂದು ಸುತ್ತು ಹಾರಾಟ ನಡೆಸುವಂತೆ ಸಹ ಪೈಲಟ್ ಎಚ್. ಎಸ್. ಅಹ್ಲುವಾಲಿಯ ಹೇಳಿದ್ದು, ಅದನ್ನು ಪೈಲಟ್ ಕಿವಿಗೊಡದಿರುವುದು ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ನಲ್ಲಿ ದಾಖಲಾಗಿದೆ. ಕೊನೆಯ ಕ್ಷಣದಲ್ಲಿ ನಮಗೆ ರನ್ ವೇ ಮುಗಿದಿದೆ ಎಂಬ ಧ್ವನಿಯ ನಂತರ ದೊಡ್ಡದಾಗಿ ವಿಮಾನ ಸ್ಪೋಟಿಸಿರುವ ಶಬ್ದ ದಾಖಲಾಗಿದೆ.
ಇದು ನಡೆದು ಇಂದಿಗೆ 10 ವರ್ಷಗಳು ಕಳೆದಿದೆ. ಆದರೆ ಮಂಗಳೂರಿಗರ ಪಾಲಿಗೆ ಇದು ಇನ್ನೂ ಕಹಿಯಾದ ದಿನವಾಗಿ ನೆನಪಿನಲ್ಲಿ ಉಳಿದಿದೆ. ದುರಂತ ಸಂಭವಿಸಿದ ಸ್ಥಳದಲ್ಲಿ ಮೃತರ ಹೆಸರುಗಳನ್ನು ಶಿಲೆಗಳಲ್ಲಿ ಬರೆದು ತಾತ್ಕಾಲಿಕ ಸ್ಮಾರಕ ನಿರ್ಮಿಸಲಾಗಿದ್ದ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿತ್ತು. 2 ವರ್ಷದ ಹಿಂದೆ ಈ ವಿವಾದ ಬಗೆಹರಿದಿದ್ದು, ಕೂಳೂರು ಸಮೀಪದ ತಣ್ಣಿರು ಬಾವಿಗೆ ತೆರಳುವ ರಸ್ತೆ ಪಕ್ಕದ 90 ಸೆಂಟ್ಸ್ ಜಾಗದಲ್ಲಿ 22/5 ಹೆಸರಿನಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಪ್ರತಿ ವರ್ಷ ಮೇ 22 ರಂದು ಇಲ್ಲಿ ಶ್ರದ್ಧಾಂಜಲಿ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತದೆ.








