ವಿಶ್ವಭಾರತಿಗೆ ಕನ್ನಡದಾರತಿ ಕಣವಿ ಇನ್ನಿಲ್ಲ Saaksha Tv
ಧಾರವಾಡ: ಕನ್ನಡದ ಜನಪ್ರಿಯ ಹಿರಿಯ ಕವಿ ನಾಡೋಜ ಡಾ. ಚನ್ನವೀರ ಕಣವಿ ನಿಧನರಾಗಿದ್ದಾರೆ.
93 ವರ್ಷದ ಚನ್ನವೀರ ಕಣವಿ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರನ್ನು ಜನವರಿ 14 ರಂದು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಜೂನ್ 28, 1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದ ಚನ್ನವೀರ ಕಣವಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಡಾ. ಚನ್ನವೀರ ಕಣವಿ ಮೊದಲ ಕವಲ ಸಂಕಲನ ಕಾವ್ಯಾಕ್ಷಿ 1949ರಲ್ಲಿ ಬಿಡುಗಡೆಯಾಗಿತ್ತು. ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ.
ಕಣವಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಸೃಷ್ಠಿ ಪಾರ್ಮಹೌಸ್ನಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧಾರ ಮಾಡಲಾಗಿದ್ದು, ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.








