ವಿಧಾನ ಸಭೆಯಲ್ಲಿ ಡಿಕೆಶಿ VS ಈಶ್ವರಪ್ಪ | ನಾನಲ್ಲ ರಾಷ್ಟ್ರದ್ರೋಹಿ ನೀನು Saaksha Tv
ಬೆಂಗಳೂರು: ಇಂದು ವಿಧಾನಸಭೆ ಅಧಿವೇಶನವು ಗದ್ದಲದಿಂದ ಕೂಡಿದ್ದು, ಪಕ್ಷ-ಪ್ರತಿಪಕ್ಷ ನಾಯಕರ ನಡುವೆ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ನಡುವೆ ಮಾತಿನ ಯುದ್ಧ ನಡೆಯಿತು.
ಕೆಲದಿನಗಳ ಹಿಂದೆ ಕೆ.ಎಸ್ ಈಶ್ವರಪ್ಪ ಅವರು ರಾಷ್ಟ್ರಧ್ವಜದ ಬಗ್ಗೆ ನೀಡಿದ ಹೇಳಿಕೆ ಇಂದು ವಿಧಾನಸಭೆಯಲ್ಲಿ ಕೊಲಾಹಲ ಸೃಷ್ಟಿಸಿತು. ಈಶ್ವರಪ್ಪ ಅವರ ಮಾತಿನ ಬಗ್ಗೆ ಸಿದ್ದರಾಮಯ್ಯ ಧ್ವನಿ ಎತ್ತುತ್ತಿದ್ದಂತೆ, ಈಶ್ವರಪ್ಪ ರಾಷ್ಟ್ರದ್ರೋಹಿ ಎಂದು ಡಿಕೆಶಿ ಕೂಗಿದರು. ಆಗ ಈಶ್ವರಪ್ಪ ನಾನಲ್ಲ ರಾಷ್ಟ್ರದ್ರೋಹಿ ನೀನು ಎಂದು ವಾಗ್ದಾಳಿ ನಡೆಸಿದರು.
ನಡೆದಿದ್ದು ಏನು?
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈಶ್ವರಪ್ಪ ಹೇಳಿಕೆಯ ಬಗ್ಗೆ ಅವರ ಅಭಿಪ್ರಾಯ ಕೇಳುತ್ತೇನೆ ಎಂದಾಗ, ದೇಶದ್ರೋಹ ಮಾಡಿವರೊಂದಿಗೆ ಏನು ಉತ್ತರ ಕೇಳುತ್ತೀರಿ ಎಂದು ಡಿಕೆಶಿ ಪ್ರಶ್ನಿಸಿದರು. ಆಗ ಶಿವಕುಮಾರ್ ಮಾತಿಗೆ ಸಿಟ್ಟಿಗೆದ್ದ ಈಶ್ವರಪ್ಪ ರಾಷ್ಟ್ರ ದ್ರೋಹಿ ಅವನು, ಜೈಲಿಗೆ ಹೋಗಿ ಬಂದವನು ನನಗೇನು ಹೇಳೋದು, ಬೇಲ್‍ನಲ್ಲಿ ಇದ್ದೀಯಾ, ನೀನು ರಾಷ್ಟ್ರ ದ್ರೋಹಿ ನೀನು ನನಗೆ ಹೇಳಬೇಡ ಎಂದು ಡಿಕೆಶಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿದರು.
ಡಿಕೆಶಿ ಮತ್ತು ಈಶ್ವರಪ್ಪ ಕೂಗಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಸ್ಪೀಕರ್, ನೀವೆಲ್ಲ ಹಿರಿಯ ಸದಸ್ಯರು, ಏಕೆ ಹೀಗೆ ಆಡುತ್ತಿದ್ದೀರಿ?. ನನಗೆ ಮನವರಿಕೆ ಆಗಬೇಕಲ್ಲವಾ? ನಿಮ್ಮನ್ನು ನೋಡಿದರೆ ಏನ್ ಮನವರಿಕೆ ಆಗುತ್ತೆ? ರೀ ಶಿವಕುಮಾರ್ ನೀವು ಹೇಗೆ ನಡೆದುಕೊಳ್ತಿದ್ದೀರಿ? ನೀವು ಒಂದು ಪಕ್ಷದ ಅಧ್ಯಕ್ಷರು ಎಂದು ಗರಂ ಆದರು.
ಬಳಿಕ ಸದನದ ಬಾವಿಗಿಳಿದು ಕಾಂಗ್ರೆಸ್ ಪಕ್ಷದ ಶಾಸಕರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾರ್ಷಲ್‍ಗಳು ಸಭಾಂಗಣದ ಒಳಗೆ ಹೋಗಿ ನಿಂತರು. ಒಂದು ಹಂತದಲ್ಲಿ ಡಿಕೆಶಿ ಮತ್ತು ಈಶ್ವರಪ್ಪ ಕೈ, ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಈಶ್ವರಪ್ಪ ಮೇಲೆ ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ ಕೂಗಾಡಿದರು. ಈವೇಳೆ ಈಶ್ವರಪ್ಪ ಬೆಂಬಲಕ್ಕೆ ರೇಣುಕಾಚಾರ್ಯ ನಿಂತರು. ಆ ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಬ್ಬರನ್ನು ಕೂಡ ಮನವೊಲಿಸಲು ಪ್ರಯತ್ನ ಪಟ್ಟರು.