ಹೆಬ್ಬಾವನ್ನು ಹಿಡಿದು ಹಿಂಸಿಸಿ ಕೊಂದು ವಿಕೃತಿ ಮೆರದ ದುರುಳರು Saaksha Tv
ಯಾದಗಿರಿ: ಒಂದು ಹೆಬ್ಬಾವನ್ನು ಹಲವಾರು ಜನರು ಸೇರಿ ವಿಪರೀತ ಹಿಂಸೆ ಕೊಟ್ಟು ಸಾಯಿಸಿ ಸಂಭ್ರಮಿಸಿರುವ ದುಷ್ಕೃತ್ಯ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯಲ್ಲಿ ನಡೆದಿದೆ.
ಬೀದರ್-ಬೆಂಗಳೂರು ಹೆದ್ದಾರಿಯ ರಂಗಂಪೇಟೆಯಲ್ಲಿ ಮಂಗಳವಾರ ರಾತ್ರಿ ಕಲ್ಲುಗಳ ಸಂದಿಯಲ್ಲಿ ಹೋಗುತ್ತಿದ್ದ ಹೆಬ್ಬಾವೊಂದನ್ನು ಹಿಡಿದ ಸಾರ್ವಜನಿಕರು ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದಾರೆ. ಅಲ್ಲದೇ ಅದರ ಮೇಲೆ ಸಾರಿಗೆಯ ಬಸ್ವೊಂದನ್ನು ಹರಿಸಿ ಹಿಂಸಿಸಿ ಸಂಭ್ರಮಿಸಿದ್ದಾರೆ. ದುರುಳರ ಈ ಕೃತ್ಯಕ್ಕೆ ಬಸ್ ಚಾಲಕ ಕೂಡ ಸಹಕರಿಸಿದ್ದಾನೆ.
ತನ್ನ ಪಾಡಿಗೆ ಸುಮ್ಮನಿದ್ದ ಹೆಬ್ಬಾವನ್ನು ಹಿಡಿದು ಹಿಂಸಿಸಿದ ಈ ಜನರು ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲಿ ನೆರೆದಿದ್ದವರು ಕೂಡ ಈ ಕೃತ್ಯವನ್ನು ನೋಡಿ ಹೋ ಎಂದು ಕೂಗಾಡಿ ವಿಕೃತ ಸಂತೋಷ ಅನುಭವಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.
ಈ ವಿಡಿಯೋವನ್ನು ನೋಡಿದರೆ ಯಾರಿಗೇ ಆದರೂ ಒಮ್ಮೆ, ‘ಛೇ ಇದೆಂಥ ವಿಕೃತಿ..’ ಎಂದನಿಸದೇ ಇರಲಾರದು.









