ಇಂದಿನ ವಿಧಾನಸಭಾ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತು
ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪನವರು ಈ ತಿಂಗಳ 9 ರಂದು ರಾಷ್ಟ್ರ ಧ್ವಜದ ಬಗ್ಗೆ ನೀಡಿರುವ ಹೇಳಿಕೆ 10ನೇ ತಾರೀಖಿನಂದು ಸುದ್ದಿ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಪ್ರಸಾರವಾಗಿರುವುದನ್ನು ನಾವೆಲ್ಲಾ ನೋಡಿದ್ದೇವೆ, ಓದಿದ್ದೇವೆ. 2006 ರಿಂದಲೂ ಸಚಿವರಾಗಿದ್ದವರು, ಅನುಭವಿಗಳು, ಹಿರಿಯರು ಆದ ಅವರು ಗೌರವದಿಂದ ಮಾತನಾಡುತ್ತಾರೆ ಎಂದು ಭಾವಿಸಿದ್ದೆ, ಆದರೆ ಅವರು ಸಂವಿಧಾನ, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಬಗೆಗೆ ಬಹಳ ಅಗೌರವದಿಂದ ಮಾತನಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಕಿಡಿಕಾರಿದ್ದಾರೆ.
. ಸಂವಿಧಾನದ ಆರ್ಟಿಕಲ್ 51(1) ರಲ್ಲಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಅದರಲ್ಲಿ ನಮ್ಮ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ಸಂವಿಧಾನಕ್ಕೆ ಪ್ರತಿಯೊಬ್ಬರು ಗೌರವ ಕೊಡಬೇಕು ಎಂದಿದೆ. ಇಂಥಾ ರಾಷ್ಟ್ರ ಧ್ವಜವನ್ನು ನೋಡಿದಾಗ ನಮಗೆಲ್ಲ ರೋಮಾಂಚನವಾಗುತ್ತೆ, ಹೋರಾಟದ ಕಿಚ್ಚು ಬರುತ್ತೆ, ಎದ್ದು ನಿಂತು ಗೌರವ ಕೊಡುತ್ತೇವೆ. ಇದು ನಮಗೆ ಸಂವಿಧಾನ ಕಲಿಸಿದೆ.
ಸಚಿವ ಈಶ್ವರಪ್ಪ ಅವರು ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಕೆಂಪುಕೋಟೆಯಲ್ಲಿ ಸದಾ ಕಾಲ ನಮ್ಮ ರಾಷ್ಟ್ರ ಧ್ವಜ ಮಾತ್ರ ಹಾರಾಡುತ್ತದೆ, ಅದು ದೇಶದ ಗೌರವದ ಸಂಕೇತ. ಅದರ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವುದು ಸಂವಿಧಾನ ಮತ್ತು ದೇಶಕ್ಕೆ ಮಾಡಿದ ಅಪಮಾನವಾಗುತ್ತದೆ. ಈ ಬಗ್ಗೆ ಕಾನೂನುಗಳಿದ್ದಾವೆ, ರಾಷ್ಟ್ರ ಗೌರವದ ಸಂಕೇತಗಳಿಗೆ ಅಗೌರವ ನಿರ್ಬಂಧಿಸುವ ಕಾಯ್ದೆ 1971ರ ಸೆಕ್ಷನ್ ಎರಡರ ಪ್ರಕಾರ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಥವಾ ಯಾವುದೇ ಜಾಗದಲ್ಲಿ ರಾಷ್ಟ್ರ ಧ್ವಜವನ್ನು ಸುಟ್ಟರೆ, ಹಾಳು ಮಾಡಿದರೆ, ಅಗೌರವ ತೋರಿದರೆ ಅಥವಾ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಂತ ಹೇಳಿಕೆ ಅಥವಾ ಬರಹ ಅಥವಾ ಕೃತ್ಯ ಎಸಗಿದರೆ ಅಂಥವರಿಗೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಅಥವಾ ದಂಡ ವಿಧಿಸುವ ಅಥವಾ ಎರಡನ್ನೂ ಶಿಕ್ಷೆ ರೂಪದಲ್ಲಿ ಜಾರಿ ಮಾಡಬಹುದು ಎಂದಿದೆ. ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ, ರಾಷ್ಟ್ರ ಲಾಂಛನಕ್ಕೆ ತೋರುವ ಅಗೌರವವು ದೇಶದ್ರೋಹ ಪ್ರಕರಣದಡಿ ಬರಲಿದೆ ಎಂದು ಭಾರತೀಯ ದಂಡ ಸಂಹಿತೆಯಲ್ಲಿದೆ.
ಈಶ್ವರಪ್ಪ ನವರು ದೇಶದ್ರೋಹದ ಹೇಳಿಕೆ ನೀಡಿ ವಾರ ಕಳೆದರೂ ಅವರ ಮೇಲೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡಿಲ್ಲ. ನನ್ನ ಪ್ರಕಾರ ಮುಖ್ಯಮಂತ್ರಿಗಳೇ ಅವರನ್ನು ಸ್ವಯಂ ಪ್ರೇರಿತರಾಗಿ ಮಂತ್ರಿ ಮಂಡಲದಿಂದ ವಜಾ ಮಾಡಬೇಕಿತ್ತು, ಆದರೆ ಮಾಡಿಲ್ಲ. ದೆಹಲಿಯಲ್ಲಿ ನಡೆಯುತ್ತಿದ್ದ ರೈತ ಚಳವಳಿಯ ಸಂದರ್ಭದಲ್ಲಿ ರಾಷ್ಟ್ರ ಧ್ವಜದ ಕೆಳಗೆ ರೈತ ಧ್ವಜ ಹಾರಿಸಿದ ಕಾರಣಕ್ಕೆ ಅಲ್ಲಿದ್ದ ರೈತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು, ಅದೇ ಕೆಲಸವನ್ನು ಈಶ್ವರಪ್ಪ ಅವರ ಮೇಲೂ ಮಾಡಬೇಕಲ್ಲವೇ? ಒಬ್ಬ ಮಂತ್ರಿಯಾಗಿ ರಾಷ್ಟ್ರ ಧ್ವಜಕ್ಕೆ ಗೌರವ ಸೂಚಿಸಲ್ಲ ಎಂದರೆ ನಿಜಕ್ಕೂ ನಾಚಿಕೆಗೇಡಿನ ವಿಚಾರ, ಇಂಥವರಿಗೆ ಒಂದು ಕ್ಷಣವೂ ಆ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇಲ್ಲ.
22 ಜುಲೈ 1947 ರಲ್ಲಿ ಸ್ವಾತಂತ್ರ್ಯ ಬರುವ ಮೊದಲೇ ನಮ್ಮ ದೇಶದ ರಾಷ್ಟ್ರ ಧ್ವಜವನ್ನು ಅಂಗೀಕರಿಸಲಾಗಿತ್ತು. ಈ ಧ್ವಜಕ್ಕೆ ದೊಡ್ಡ ಇತಿಹಾಸವೇ ಇದೆ. ಇದಕ್ಕೂ ಮೊದಲು ಕೇಸರಿ, ಬಿಳಿ, ಹಸಿರು ಮಧ್ಯದಲ್ಲಿ ಚರಕ ಹೊಂದಿರುವ ಧ್ವಜ ರಾಷ್ಟ್ರ ಧ್ವಜವಿತ್ತು. ಆ ನಂತರ ತ್ರಿವರ್ಣ ಧ್ವಜದ ಮಧ್ಯಭಾಗದಲ್ಲಿ ಅಶೋಕ ಚಕ್ರ ಹೊಂದಿರುವ ಧ್ವಜವನ್ನು ರಾಷ್ಟ್ರ ಧ್ವಜವಾಗಿ ಅಂಗೀಕಾರ ಮಾಡಲಾಯಿತು.
ರಾಷ್ಟ್ರ ಧ್ವಜಕ್ಕೆ ಅಪಚಾರ ಎಸಗಿರುವ ಈಶ್ವರಪ್ಪ ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಿ, ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ತನಿಖೆಯಾಗಬೇಕು ಎಂದು ಆಗ್ರಹಿಸುತ್ತೇನೆ.