ಪೂರ್ವ ಉಕ್ರೇನ್ನ ಎರಡು ಪ್ರದೇಶಗಳನ್ನು ‘ಸ್ವತಂತ್ರ’ವೆಂದು ಘೋಷಿಸಿದ ರಷ್ಯಾ ಅಧ್ಯಕ್ಷ Saaksha Tv
ರಷ್ಯಾ: ಪೂರ್ವ ಉಕ್ರೇನ್ನ ಎರಡು ಪ್ರದೇಶಗಳನ್ನು ‘ಸ್ವತಂತ್ರ’ವೆಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ.
ಪೂರ್ವ ಉಕ್ರೇನ್ನ ಎರಡು ಪ್ರದೇಶಗಳನ್ನು ‘ಸ್ವತಂತ್ರ’ವೆಂದು ಘೋಷಿಸಿ ಅಲ್ಲಿ ತನ್ನ ಸೈನ್ಯವನ್ನು ನಿಯೋಜಿಸಲು ಆದೇಶಿಸಿದ್ದು,ರಷ್ಯಾ- ಉಕ್ರೇನ್ ಮಧ್ಯೆ ಯುದ್ಧದ ಕಾರ್ಮೋಡವನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೇ ಉಕ್ರೇನ್ ಪ್ರತ್ಯೇಕತಾವಾದಿಗಳಿಗೆ ರಷ್ಯಾ ಬೆಂಬಲದ ಬಳಿಕ ಇದೀಗ ಆ ಪ್ರದೇಶಗಳಲ್ಲಿ ಶಾಂತಿಪಾಲನಾ ಕಾರ್ಯಾಚರಣೆ ಹೆಸರಿನಲ್ಲಿ ರಷ್ಯಾ ಸೇನೆ ಪೂರ್ವ ಉಕ್ರೇನ್ನತ್ತ ಸಾಗುತ್ತಿದೆ. ಇದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಪ್ರಾರಂಭಿಕ ನಡೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ವ್ಲಾಡಿಮಿರ್ ಪುಟಿನ್, ಪೂರ್ವ ಉಕ್ರೇನ್ ಈ ಹಿಂದಿನಿಂದಲೂ ರಷ್ಯಾದ ಭಾಗವಾಗಿದೆ. ಇದು ದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ. ಇಲ್ಲಿ ತನ್ನ ಸೇನೆಯನ್ನು ನಿಯೋಜಿಸುತ್ತಿರುವುದಕ್ಕೆ ರಷ್ಯಾದ ಜನರು ಸರ್ಕಾರವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಪೂರ್ವ ಉಕ್ರೇನ್ ಪ್ರದೇಶಗಳ ಮೇಲೆ ರಷ್ಯಾ ಸೇನೆಯನ್ನು ನೆಲೆಗೊಳಿಸುವ ಬಗ್ಗೆ ಪುಟಿನ್ ಅವರು, ಜರ್ಮನಿ ಮತ್ತು ಫ್ರಾನ್ಸ್ ಅಧ್ಯಕ್ಷರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಈ ಬಗ್ಗೆ ಇಬ್ಬರೂ ಅಧ್ಯಕ್ಷರು ನಿರಾಶೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.







