ನಟ, ಸಾಮಾಜಿಕ ಹೋರಾಟಗಾರ ಚೇತನ್ ಅರೇಸ್ಟ್ Saaksha Tv
ಬೆಂಗಳೂರು: ನ್ಯಾಯಾಂಗ ನಿಂದನೆ ಆರೋಪದಡಿ ಪೊಲೀಸರು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನ ಬಂಧಿಸಿದ್ದಾರೆ.
ಹಿಜಾಬ್ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಟ್ಟೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಭಂದ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಟ್ಟೀಟ್ ಆರೋಪದಡಿ ನಟ ಚೇತನ್ರನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಎಮ್ ಎನ್ ಅನುಚೇತ್ ಖಚಿತಪಡಿಸಿದ್ದಾರೆ.
ಈ ಬಗ್ಗೆ ನಟ ಚೇತನ್ ಪತ್ನಿ ಮೇಘಾ ಪ್ರತಿಕ್ರಿಯಿಸಿದ್ದು, ಪೊಲೀಸರು ಯಾವುದೇ ನೋಟಿಸ್ ನೀಡದೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ಎದುರು ಫೇಸ್ಬುಕ್ ಲೈವ್ನಲ್ಲಿ ಆತಂಕ ವ್ಯಕ್ತಪಡಿಸಿರುವ ಮೇಘಾ, ಇಂದು ಮಧ್ಯಾಹ್ನ 3 ಗಂಟೆಯಿಂದ ನನ್ನ ಪತಿ ಚೇತನ್ ಕಾಣುತ್ತಿಲ್ಲ ಎಂದಿದ್ದರು.
ಚೇತನ್ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅವರ ಗನ್ಮ್ಯಾನ್ ಫೋನ್ಗೆ ಕೂಡ ಸಿಗುತ್ತಿಲ್ಲ. ಇದು ಪೊಲೀಸರು ಮಾಡಿರುವ ಅಪಹರಣವಾಗಿದೆ. ಈ ದೇಶದ ಯಾವುದೇ ಪ್ರಜೆಯನ್ನು ವಿಚಾರಣೆಗಾಗಿ ಕರೆದೊಯ್ಯಬೇಕಾದರೆ ಅವರ ಕುಟುಂಬ ಸದಸ್ಯರಿಗೆ ತಿಳಿಸಬೇಕು. ಮೊದಲೇ ನೋಟಿಸ್ ನೀಡಬೇಕು ಎಂದು ಮೇಘಾ ಅವರು ಹೇಳಿದ್ದಾರೆ.
ಅವರಿಗೆ ನ್ಯಾಯಾಂಗದ ಸಹಾಯ ಪಡೆಯುವ ಹಕ್ಕು ಇದೆ. ಇದನ್ನು ಉಲ್ಲಂಘಿಸಿರುವ ಪೊಲೀಸರು ಉದ್ದೇಶಪೂರ್ವಕವಾಗಿ ಚೇತನ್ಗೆ ಕಿರುಕುಳ ನೀಡುತ್ತಿದ್ದಾರೆ. ಇದು ಸರಿಯಾದ ಮಾರ್ಗವಲ್ಲ ಎಂದು ದಲಿತ ಪರ ಸಂಘಟನೆಗಳು ಆರೋಪಿಸಿವೆ.
ಚೇತನ್ ವಿರುದ್ಧದ ದೂರಿನಲ್ಲಿ ಏನಿದೆ?
ಚೇತನ್ಕುಮಾರ್ ಅಹಿಂಸಾ ಅವರು ಸಾಮಾನ್ಯ ಜನರಲ್ಲಿ ಮತ್ತು ಒಂದು ಕೋಮಿನ (ಮುಸ್ಲಿಂ) ಜನಾಂಗದವರಿಗೆ ಕಾನೂನು ಮತ್ತು ಸುವ್ಯವಸ್ಥೆ, ನ್ಯಾಯಾಲಯ, ಸರ್ಕಾರ ಮತ್ತು ನಮ್ಮ ದೇಶದ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಅಪನಂಬಿಕೆ, ಆಕ್ರೋಶ ಬರುವ ಹಾಗೆ ಟ್ವೀಟ್ ಮಾಡಿದ್ದಾರೆ. ಮುಸ್ಲಿಂ ಕೋಮಿನವರು ಮತ್ತು ಇತರೆ ಜನರು ಪ್ರತಿಭಟನೆ, ಗಲಭೆ ಹಾಗೂ ಇತ್ಯಾದಿಗಳನ್ನು ಮಾಡುವಂತೆ ಪ್ರಚೋದಿಸುತ್ತಿದ್ದಾರೆ.











