ಚಿಕ್ಕೋಡಿ : ವಿಶ್ವವನ್ನೇ ತಲ್ಲಣಗೊಳಿಸಿರುವ ಹೆಮ್ಮಾರಿ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಎಲ್ಲಾ ದೇಶದಲ್ಲಿ ವೈದ್ಯರು ನಾನಾ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೊರೊನಾಗೆ ಔಷಧ ಕಂಡುಹಿಡಿಯಲು ಎಲ್ಲೆಡೆ ಹಲವು ಪ್ರಯೋಗಗಳು ಭರದಿಂದ ಸಾಗುತ್ತಿದೆ. ಭಾರತದಲ್ಲೂ ಈ ಹೆಮ್ಮಾರಿಗೆ ಔಷಧ ಕಂಡು ಹಿಡಿಯುವ ಕಾರ್ಯ ನಡೆಯುತ್ತಿದ್ದು, ಇದೀಗ ಆಯುರ್ವೇದದಲ್ಲೂ ನಾಲ್ಕು ಔಷಧಗಳ ಪ್ರಾಯೋಗಿಕ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ನಡುವೆ ಚಿಕ್ಕೋಡಿಯ ಅಥಣಿ ವೈದ್ಯರೊಬ್ಬರು ಕೊರೊನಾ ವೈರಸ್ ಸೋಂಕಿಗೆ ತಮ್ಮದೇ ಆದ ಔಷಧವನ್ನು ಕಂಡುಹಿಡಿದಿದ್ದಾರೆ. ಅಲ್ಲದೆ, ತಮ್ಮ ಮನೆಯವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.
ಡಾ. ರಮೇಶ್ ಗುಳ್ಳ ಎಂಬ ವೈದ್ಯರು ಈ ಪ್ರಯೋಗವನ್ನು ಮಾಡಿದ್ದು, ಇವರ ಪ್ರಕಾರ ರುಬೊಲಾ ಚಿಕಿತ್ಸೆಗೆ ಬಳಸುವ ಚುಚ್ಚುಮದ್ದನ್ನು ತೆಗೆದುಕೊಂಡರೆ ಕೊರೊನಾ ಸೋಂಕಿನ ಆತಂಕದಿಂದ ಪಾರಾಗಬಹುದು ಎಂದು ಪ್ರತಿಪಾದಿಸಿದ್ದಾರೆ.
ಅಂದ್ಹಾಗೆ ಡಾ.ರಮೇಶ್ ಗುಳ್ಳ ಅವರು ಮುಂಬೈಯಲ್ಲಿ ಕ್ಯಾನ್ಸರ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಮೇಶ್ ಗುಳ್ಳ ಹೇಳುವಂತೆ “ಎಂಆರ್ ಎಂಎಂಆರ್ ಚುಚ್ಚುಮದ್ದನ್ನು ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಂಡರೆ ಕೊರೊನಾ ಸೋಂಕು ತಗಲುವ ಭಯವೇ ಇರುವುದಿಲ್ಲ. ಈ ಚುಚ್ಚುಮದ್ದನ್ನು ತಮ್ಮ ಮನೆಯವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿರುವುದಾಗಿ ಹೇಳಿಕೊಂಡಿರುವ ಅವರು, ಕೇವಲ 150 ರೂ. ವೆಚ್ಚದಲ್ಲಿ ಈ ಚಿಕಿತ್ಸೆ ಲಭ್ಯ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಔಷಧ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಯಥೇಚ್ಚವಾಗಿ ಲಭ್ಯ ಇರುವುದಾಗಿ ತಿಳಿಸಿದ್ದಾರೆ.








