UP Election – ಚುನಾವಣಾ ರ್ಯಾಲಿಯಲ್ಲಿ ಕುಟುಂಬ ರಾಜಕಾರಣದ ಬಗ್ಗೆ ತಿವಿದ ಮೋದಿ
ಉತ್ತರ ಪ್ರದೇಶದಲ್ಲಿ 5 ಹಂತಗಳ ಮತದಾನ ಜರುಗಿದ್ದು, ಉಳಿದ 2 ಹಂತದ ಚುನಾವಣೆಗೆ ಪ್ರಚಾರ ಬಿರುಸಿನಿಂದ ಸಾಗಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತದಾರರನ್ನು ಸೆಳೆಯಲು ಸಾರ್ವಜನಿಕ ಸಭೆ, ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಮಹಾರಾಜ್ ಗಂಜ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಭಾರತದಲ್ಲಿ ತಯಾರಾದ ಕೋವಿಡ್ ಲಸಿಕೆಯ ಬಗ್ಗೆ ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡಬೇಕು. ದೊಡ್ಡ ದೊಡ್ಡ ದೇಶಗಳೂ ಲಸಿಕೆ ನೀಡಿಕೆಯಲ್ಲಿ ಭಾರತಕ್ಕಿಂತ ಹಿಂದಿವೆ. ಇದು ಆತ್ಮನಿರ್ಭರ ಭಾರತದ ಶಕ್ತಿ ಎಂದರು. ಆದರೆ ಭಾರತದ ಆತ್ಮವಿಶ್ವಾಸದ ಬಗ್ಗೆ, ನಮ್ಮ ಸ್ವಾವಲಂಬನೆಯ ಬಗ್ಗೆ ಕೆಲವು ಪರಿವಾರವಾದಿಗಳು ದಾಳಿ ಮಾಡುತ್ತಿದ್ದು, ಉತ್ತರ ಪ್ರದೇಶದ ಜನರು ಇದನ್ನು ಕ್ಷಮಿಸುವುದಿಲ್ಲ ಎಂದು ಎಸ್ ಪಿ ಮತ್ತು ಕಾಂಗ್ರೇಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಲವು ಪರಿವಾರ ವಾದಿಗಳು ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದ್ದರು. ಆದರೆ ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅದನ್ನು ಹಳಿಗೆ ತರುತ್ತಿದೆ. ಪ್ರಗತಿಯ ಪ್ರತಿಯೊಂದು ವಿಚಾರಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದರು. ಕುಟುಂಬ ರಾಜಕೀಯದಿಂದ ಸರ್ಕಾರ ತಮ್ಮ ತಿಜೋರಿ ತುಂಬಿಕೊಂಡಿತೇ ಹೊರತು, ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿತು. ಈಗ ಕಳೆದ 5 ವರ್ಷದಲ್ಲಿ ಅನೇಕ ಮೂಲಸೌಕರ್ಯ ಅಭಿವೃದ್ಧಿ ಆಗಿದೆ ಎಂದು ಹಿಂದಿನ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಿರ್ಜಾಪುರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿ, ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳನ್ನೂ ಹಿಂಪಡೆಯುವ ಮನೋಸ್ಥಿತಿಯ ಪಕ್ಷಗಳನ್ನು ತಿರಸ್ಕರಿಸುವಂತೆ ಮನವಿ ಮಾಡಿದರು.