Virat kohli | “ಶತಕ” ವಿರಾಟ್ ಗೆ ಹೊಸದಲ್ಲ.. ಆದ್ರೆ ಈ “ಸೆಂಚೂರಿ” ಪ್ರತ್ಯೇಕ
ವಿರಾಟ್ ಕೊಹ್ಲಿಗೆ ಶತಕ ಅನ್ನೋದು ಹೊಸದಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 70ಕ್ಕೂ ಹೆಚ್ಚು ಶತಕಗಳನ್ನ ಬಾರಿಸಿರುವ ವಿರಾಟ್ ಕೆರಿಯರ್ ನಲ್ಲಿ ಒಂದೊಂದು ಶತಕಕ್ಕೂ ಪ್ರತ್ಯೇಕತೆ ಇದೆ. ಆದರೆ ಈ ಬಾರಿ ಅವರು ಸಾಧಿಸಲಿರುವ ‘ಶತಕ’ಕ್ಕೆ ವಿಶೇಷ ಸ್ಥಾನವಿದೆ. ಆರಂಭದಲ್ಲಿ ಸೀಮಿತ ಓವರ್ ಗಳ ಆಟಗಾರನಾಗಿ ಹೆಸರು ಮಾಡಿದ್ದ ಕೊಹ್ಲಿ ಮೂರು ವರ್ಷಗಳ ನಂತರ ಟೆಸ್ಟ್ ಗೆ ಪದಾರ್ಪಣೆ ಮಾಡಿದರು. ಇದೀಗ 100 ಪಂದ್ಯಗಳ ಮೈಲುಗಲ್ಲನ್ನು ತಲುಪುತ್ತಿದ್ದಾರೆ. ODI, T20ಯಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ವಿರಾಟ್, ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಆದ್ರೂ ಟೆಸ್ಟ್ ಕ್ರಿಕೆಟ್ ಅಂದ್ರೆ ಇಷ್ಟ ಎನ್ನುವ ಈ ಜಮಾನದ ಅಪರೂಪದ ಬ್ಯಾಟರ್ ವಿರಾಟ್ ಕೊಹ್ಲಿ.
2008ರಲ್ಲಿ ಅಂಡರ್-19 ವಿಶ್ವಕಪ್ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ವಿರಾಟ್ ಕೊಹ್ಲಿ, T20 ಮತ್ತು ODI ತಂಡಕ್ಕೆ ತುಂಬಾ ಬೇಗ ಪದಾರ್ಪಣೆ ಮಾಡಿದರು. ಆದರೆ, ದಿಗ್ಗಜರೇ ತುಂಬಿದ್ದ ಟೆಸ್ಟ್ ತಂಡದಲ್ಲಿ ಅವಕಾಶಕ್ಕಾಗಿ ಕಾಯಬೇಕಾಯಿತು. ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 59 ಏಕದಿನ ಪಂದ್ಯಗಳನ್ನು ಆಡಿದ ನಂತರ ವೆಸ್ಟ್ ಇಂಡೀಸ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಈ ಅವರು ಸರಣಿಯಲ್ಲಿ 5 ಇನ್ನಿಂಗ್ಸ್ಗಳಲ್ಲಿ 76 ರನ್ ಗಳಿಸಿದರು. ಆದಾಗ್ಯೂ, ತವರು ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಎರಡು ಅರ್ಧ ಶತಕಗಳನ್ನು ಸಿಡಿಸಿದರು.
ಇದಾದ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲುಂಡಿತ್ತು. ಆದ್ರೆ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಭಾರತದ ಪರ ಉತ್ತಮ ಪ್ರದರ್ಶನ ನೀಡಿದರು. ಇಲ್ಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕದ ಸಂಭ್ರಮ ಆಚರಿಸಿಕೊಂಡರು.
ಇದಾದ ಬಳಿಕ ಸಚಿನ್ ವಿದಾಯ ಘೋಷಿಸಿದ ಬಳಿಕ 2013ರಲ್ಲಿ ದಕ್ಷಣ ಆಫ್ರಿಕಾ ಮೇಲೆ ಜೋಹಾನ್ಸ್ ಬರ್ಗ್ ಟೆಸ್ಟ್ ನಲ್ಲಿ ಮೊದಲ ಬಾರಿ ವಿರಾಟ್ ನಾಲ್ಕೇ ಸ್ಥಾನದಲ್ಲಿ ಕಣಕ್ಕಿಳಿಸಿದ್ದರು. ಆ ಮ್ಯಾಚ್ ನಲ್ಲಿ ವಿರಾಟ್ ಮೊದಲ ಇನ್ನಿಂಗ್ಸ್ ನಲ್ಲಿ 119, ಎರಡನೇ ಇನ್ನಿಂಗ್ಸ್ ನಲ್ಲಿ 96 ರನ್ ಗಳಿಸಿದರು. ಇದರೊಂದಿಗೆ ಸಚಿನ್ ರ ನಾಲ್ಕನೇ ಸ್ಥಾನಕ್ಕೆ ನಾನೇ ಸೂಕ್ತ ಎಂದು ಸಾಭೀತು ಪಡಿಸಿದರು. ಮತ್ತೆ ಎರಡು ತಿಂಗಳ ಬಳಿಕ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 105 ರನ್ ಸಿಡಿಸಿದರು.
ಟೆಸ್ಟ್ ನಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸಂದರ್ಭದಲ್ಲಿಯೇ ವಿರಾಟ್ ಕೊಹ್ಲಿ 2014 ರ ಇಂಗ್ಲೆಂಡ್ ಟೂರ್ನಿಯಲ್ಲಿ ಘನಘೋರ ವೈಫಲ್ಯ ಅನುಭವಿಸಿದರು. 10 ಇನ್ನಿಂಗ್ಸ್ ಗಳಲ್ಲಿ ಕೇವಲ 134 ರನ್ ಗಳಿಸಿ ಟೀಕೆಗಳಿಗೆ ಗುರಿಯಾದರು. ಆದ್ರೆ 2018ರ ಇಂಗ್ಲೆಂಡ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬ್ರಿಟಿಷರಿಗೆ ಮುಟ್ಟಿ ನೋಡಿಕೊಳ್ಳುವ ರಿಪ್ಲೆ ಕೊಟ್ಟರು. 10 ಇನ್ನಿಂಗ್ಸ್ ಗಳಲ್ಲಿ 2 ಸೆಂಚೂರಿ, ಮೂರು ಅರ್ಧ ಶತಕಗಳೊಂದಿಗೆ 593 ರನ್ ಗಳಿಸಿದರು.
ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ವಿರಾಟ ರೂಪ ಕಾಣಿಸಿದ್ದು 2014-15 ಆಸ್ಟ್ರೇಲಿಯಾ ಪ್ರವಾಸದಲ್ಲಿ. ಧೋನಿ ಗೈರಿನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ಅಡಿಲೈಡ್ ನಲ್ಲಿ 115,141 ಶತಕ ಸಿಡಿಸಿದರು. ಮುಖ್ಯವಾಗಿ ಎರಡನೇ ಇನ್ನಿಂಗ್ಸ್ ನಲ್ಲಿ 364 ರನ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಪರ ವಿರಾಟ್, ತಂಡವನ್ನು ಗೆಲುವಿನ ಅಂಚಿನ ತನಕ ಕರೆದುಕೊಂಡರು ಹೋದರು. ಆದ್ರೆ ಟೀಂ ಇಂಡಿಯಾ 48 ರನ್ ಗಳಿಂದ ಸೋಲುಂಡಿತು. ಆದ್ರೆ ಆಸೀಸ್ ಬೌಲರ್ ಗಳ ವಿರಾಟ್ ಮಾಡಿದ ಸವಾರಿ, ನಾಯಕನಾಗಿ ವಿರಾಟ್ ಅಟಿಟ್ಯೂಡ್ ಎಲ್ಲರ ಮನ ಗೆದ್ದಿತ್ತು.
ಇದಾದ ಬಳಿಕ ವಿರಾಟ್ ಕೊಹ್ಲಿ ನಾಯಕರಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ದಾಖಲೆಗಳ ದಾಖಲೆಗಳನ್ನು ಸೃಷ್ಟಿಸಿದರು. 68 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡಿಸಿದ ವಿರಾಟ್ ಕೊಹ್ಲಿ, 40 ಗೆಲುವು, 17 ಸೋಲುಗಳೊಂದಿಗೆ ಗೆಲುವಿನ ಸರಾಸರಿ 58.82 ಇದೆ. ನಾಯಕರಾಗಿದ್ದರೂ ವಿರಾಟ್ ಬ್ಯಾಟ್ ನಿಂದ ರನ್ ಮಳೆ ನಿಂತಿರಲಿಲ್ಲ. ನಾಯಕರಾಗಿ ವಿರಾಟ್ ಕೊಹ್ಲಿ ಏಳು ಡಬಲ್ ಸೆಂಚೂರಿಗಳನ್ನ ಸಿಡಿಸಿದ್ದಾರೆ.
ಒಟ್ಟಾರೆ ವಿರಾಟ್ ಕೊಹ್ಲಿ ಈ ವರೆಗೂ 99 ಟೆಸ್ಟ್ ಪಂದ್ಯಗಳಲ್ಲಿ 50.39 ರ ಸರಾಸರಿಯಲ್ಲಿ 7962 ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕ, 28 ಅರ್ಧ ಶತಕಗಳಿವೆ.











