ಬೆಂಗಳೂರು : ಕೊರೊನಾ ವೈರಸ್ ಹೊಡೆತಕ್ಕೆ ರಾಜ್ಯ ನಡಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಪ್ರಾರಂಭದಿಂದಲೂ ತನ್ನ ಅಟ್ಟಹಾಸ ಮುಂದುವರೆಸಿಕೊಂಡು ಬಂದಿದೆ. ಬಿಬಿಎಂಪಿ ಕೊರೊನಾ ಸೋಂಕು ನಿಯಂತ್ರಣ ಮಾಡಲು ತನ್ನದೆ ಪ್ರಯತ್ನ ಮಾಡುತ್ತಿದೆ.
ವಲಸೆ ಕಾರ್ಮಿಕರಿಗೆ ಪಾಲಿಕೆ ವತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ, ಪ್ಯಾಲೆಸ್ ಗ್ರೌಂಡ್‌ನ ಟೆನಿಸ್ ಪೆವಿಲಿಯನ್, ಮ್ಯಾನ್ಫೊ ಕನ್ವೆಷನ್ ಸೆಂಟರ್‌ಗಳಲ್ಲಿ ತಂಗಲು ವ್ವವಸ್ಥೆ ಕಲ್ಪಿಸಿದ್ದು, ಅವರಿಗೆ ಉಚಿತ ಊಟದ ವ್ಯವಸ್ಥೆಯ್ನು ಮಾಡಲಾಗಿತ್ತು. ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವಲಸೆ ಕಾರ್ಮಿಕರನ್ನು ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಪಾಲಿಕೆ ಗುರುತಿಸುವ ಸ್ಥಳಗಳಿಗೆ ತಂದು ಬಿಡಲಾಗಿತ್ತು. ಅವರಿಗೆ ಉಚಿತ ಊಟದ ವ್ಯವಸ್ಥೆ ಬಿಬಿಎಂಪಿ ಮಾಡಿದೆ. ಅಲ್ಲದೆ ಲಾಕ್ ಡೌನ್ ಸಡಿಲಗೊಂಡು ಬಸ್, ರೈಲು ಪ್ರಯಾಣ ಪ್ರಾರಂಭವಾದ ಬಳಿಕ ಒರಿಸ್ಸಾ, ಉತ್ತರ ಪ್ರದೇಶ, ತ್ರಿಪುರ, ಬಿಹಾರ್ ಸೇರಿದಂತೆ ಇನ್ನಿತರೆ ರಾಜ್ಯಗಳ ವಲಸೆ ಕಾರ್ಮಿಕರ ಪಟ್ಟಿ ಮಾಡಿ, ಆನ್‌ಲೈನ್ ಮೂಲಕ ರೈಲುಗಳ ಬುಕ್ಕಿಂಗ್ ಮಾಡಲಾಗುತ್ತಿದೆ. ಪಾಲಿಕೆ ವತಿಯಿಂದ ಆರೋಗ್ಯ ತಪಾಸಣೆ ಕೂಡಾ ಮಾಡಲಾಗುತ್ತಿದೆ. ಹಾಗೂ ಇತರೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೀಗೆ ಕೊರೊನಾ ನಿಯಂತ್ರಣ ಮಾಡಲು ಮತ್ತು ಕಾರ್ಮಿಕರ ರಕ್ಷಣೆಗಾಗಿ ದುಡಿದ ಬಿಬಿಎಂಪಿ ಅಧಿಕಾರಿ ಗಳಿಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ ಅಭಿನಂದನೆ ಸಲ್ಲಿಸಿದೆ. ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಬಿಬಿಎಂಪಿ ಹಿರಿಯ ಅಧಿಕಾರಿಗಳಿಗೆ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.








