ಕಾನ್ಪುರ, ಮೇ 23 : ಕೊರೊನಾ ಲಾಕ್ ಡೌನ್ ಹಿನ್ನೆಲೆ ಎಷ್ಟೋ ಮದುವೆಗಳು ಮುಂದೂಡಲಾಗಿದೆ. ಕೆಲ ಮದುವೆಗಳನ್ನು ಲಾಕ್ ಡೌನ್ ನಡುವೆಯೂ ಹೇಗೋ ಮಾಡಿ ಮುಗಿಸಿದ ಹಲವು ಉದಾಹರಣೆಗಳಿವೆ. ಅದರಂತೆ ಉತ್ತರ ಪ್ರದೇಶದಲ್ಲಿ ಒಂದು ವಿವಾಹ ಜರುಗಿದ್ದು, ಇದಕ್ಕೆ ಲಾಕ್ ಡೌನ್ ಕಾರಣವಾಗಿದೆ. ಅಂದರೆ ಕೊರೊನಾ ಲಾಕ್ ಡೌನ್ ನಿಂದಾಗಿಯೇ ಕಾನ್ಪುರದಲ್ಲಿ ಒಂದು ಪ್ರೇಮ ಪ್ರಕರಣ ದಾಖಲಾಗಿದ್ದು, ಅದು ಮದುವೆಯೊಂದಿಗೆ ಸುಖಾಂತ್ಯ ಕಂಡಿದೆ.
ನೀಲಂ ಹಾಗೂ ಅನಿಲ್ ಎಂಬೋರ ಪ್ರೇಮ ವಿವಾಹಕ್ಕೆ ಲಾಕ್ ಡೌನ್ ಕಾರಣವಾಗಿದ್ದು, ಅನಿಲ್ ಅವರು ಭಿಕ್ಷೆ ಬೇಡುತ್ತಿದ್ದ ನೀಲಂ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ.
ಹೌದು..! ನೀಲಂ ಎಂಬ ಯುವತಿ ತನ್ನ ತಂದೆ ತಾಯಿ ನಿಧನರಾದ ಬಳಿಕ ಅಣ್ಣ ಹಾಗೂ ಅತ್ತಿಗೆ ಜೊತೆ ವಾಸಿಸುತ್ತಿದ್ದಳು. ಆದರೆ ಅಣ್ಣ, ಅತ್ತಿಗೆ ಆಕೆಯನ್ನು ಮನೆಯಿಂದ ಹೊರದಬ್ಬಿದ್ದರು. ಅದರಿಂದಾಗಿ ಕಾನ್ಪುರದ ಕಾಕದೇವ್ ಪ್ರದೇಶದಲ್ಲಿ ಭಿಕ್ಷುಕರೊಂದಿಗೆ ನೀಲಂ ವಾಸಿಸುತ್ತಿದ್ದಳು. ಆದರೆ ಲಾಕ್ ಡೌನ್ ಆದ ಮೇಲೆ ಹಸಿವು ತಣಿಸಲು ಆಹಾರವೂ ಸಿಗದೇ ಕಂಗಾಲಾಗಿದ್ದಳು.
ಈ ಮಧ್ಯೆ ಭಿಕ್ಷುಕರಿಗೆ ಪ್ರತಿದಿನ ಆಹಾರ ತಲುಪಿಸುವಂತೆ ಸ್ಥಳೀಯ ಉದ್ಯಮಿ ಲಾಲತ ಪ್ರಸಾದ್ ಅವರು ತನ್ನ ಚಾಲಕ ಅನಿಲ್ ಗೆ ಸೂಚಿಸಿದ್ದರು. ಹಾಗೆ ಕಳೆದ 45 ದಿನಗಳಿಂದ ಪ್ರತಿದಿನ ಅನಿಲ್ ಈ ಭಿಕ್ಷುಕರ ಗುಂಪಿಗೆ ಆಹಾರ ತಲುಪಿಸುತ್ತಿದ್ದರು. ಹೀಗೆ ಪ್ರತಿದಿನದ ಭೇಟಿ ಅನಿಲ್ ಹಾಗು ನೀಲಂ ನಡುವಿನ ಪ್ರೇಮಾಂಕುರಕ್ಕೆ ಕಾರಣವಾಗಿದೆ.
ಬಳಿಕ ಅನಿಲ್ ತನ್ನ ಪ್ರೇಮದ ವಿಚಾರವನ್ನು ಮನೆಯವರಿಗೆ ತಿಳಿಸಿ ನೀಲಂ ಅವರನ್ನು ವರಿಸಿದ್ದಾರೆ