MODI | ಮಹಿಳಾ ಹಣಕಾಸು ಸಚಿವರನ್ನೇ ಹೊಂದಿರುವುದು ಭಾರತಕ್ಕೆ ಹೆಮ್ಮೆ
ನವದೆಹಲಿ : ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದು, ಮಹಿಳಾ ಹಣಕಾಸು ಸಚಿವರನ್ನೇ ಹೊಂದಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಇತ್ತೀಚೆಗೆ ಪ್ರಗತಿಪರ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು “ಪ್ರಗತಿ ಮತ್ತು ಮಹತ್ವಾಕಾಂಕ್ಷಿ ಆರ್ಥಿಕತೆಗಾಗಿ ಹಣಕಾಸು’ ಎನ್ನುವ ವಿಷಯದ ಕುರಿತಾದ ವೆಬಿನಾರ್ ನಲ್ಲಿ ಪಾಲ್ಗೊಂಡರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವೆಬಿನಾರ್ ನಲ್ಲಿ , ಹಣಕಾಸು ಕ್ಷೇತ್ರದ ಪ್ರಮುಖರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಪ್ರಧಾನಿಗಳು, ಶತಮಾನದ ಸಾಂಕ್ರಾಮಿಕ ಸಮಯದ ನಡುವೆಯೂ, ದೇಶದ ಆರ್ಥಿಕತೆ ಮರಳಿ ಹಳಿಗೆ ಬಂದಿದೆ. ಈ ಬಾರಿಯ ಬಜೆಟ್ ನಲ್ಲಿ ಪ್ರಗತಿಗೆ ಇನ್ನಷ್ಟು ವೇಗ ನೀಡಲು, ವಿದೇಶಿ ಬಂಡವಾಳ ಹೂಡಿಕೆ. ಮೂಲಸೌಕರ್ಯ ಹೂಡಿಕೆಯಲ್ಲಿ ತೆರಿಗೆ ಕಡಿಮೆಗೊಳಿಸಿರುವುದು ಸೇರಿದಂತೆ, ಹಲವು ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ ದೇಶದ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಹಣಕಾಸು ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಆದ್ಯತೆ ನೀಡಲಾಗುತ್ತಿದೆ. ಆರ್ಥಿಕತೆಗೆ ಹೆಚ್ಚಿನ ವೇಗ ದೊರೆಯುತ್ತಿದೆ. ದೇಶದಲ್ಲಿ ಇಂದು ಆತ್ಮನಿರ್ಭರ ಅಭಿಯಾನ ನಡೆಯುತ್ತಿದ್ದು, ಪರಾವಲಂಬನೆ ತಪ್ಪಿಸುವಲ್ಲಿ , ಹಣಕಾಸು ಸಂಸ್ಥೆಗಳು ಮಹತ್ವದ ಪಾತ್ರ ನಿಭಾಯಿಸಬೇಕಾಗಿದೆ ಎಂದು ಪ್ರಧಾನಿಗಳು ತಿಳಿಸಿದರು.
ಇನ್ನು ಫಿನ್ ಟೆನ್, ಅಗ್ರಿಟೆಕ್, ಕೌಶಲ ವಿಕಾಸ ಸೇರಿದಂತೆ, ಎಲ್ಲ ಕ್ಷೇತ್ರಗಳಿಗೂ ವಿತ್ತೀಯ ಸಂಸ್ಥೆಗಳ ಸಹಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರಮುಖವಾದ 8ರಿಂದ 10 ವಲಯಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಬೇಕು. ಅವುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ, ವಿಶ್ವದ ಮೂರು ಉನ್ನತ ಸ್ಥಾನಗಳಲ್ಲಿ ಒಂದಾಗಿ ಅವನ್ನು ಮಾರ್ಪಡಿಸಬೇಕು ಎಂದು ಕರೆ ನೀಡಿದರು.
PM Narendra modi International Women’s Day









