ಭಾರತದಲ್ಲಿಯೇ ಎಂಬಿಬಿಎಸ್ ಮುಂದುವರೆಸಲು ಅವಕಾಶ ನೀಡಬೇಕು: ಪ್ರಿಯಾ ಪಾಟೀಲ್ – Saaksha Tv
ಕಲಬುರಗಿ: ಇನ್ಮುಂದೆ ನನಗೆ ಭಾರತದಲ್ಲಿಯೇ ಎಂಬಿಬಿಎಸ್ ಮುಂದುವರೆಸಲು ಭಾರತ ಸರಕಾರ ಅವಕಾಶ ಮಾಡಿಕೊಡಬೇಕೆಂದು ಉಕ್ರೇನ್ ನಿಂದ ಮರಳಿದ ಕಲಬುರಗಿಯ ವಿದ್ಯಾರ್ಥಿನಿ ಮನವಿ ಮಾಡಿಕೊಂಡಿದ್ದಾರೆ.
ಉಕ್ರೇನ್ ಯುದ್ಧಭೂಮಿಯಿಂದ ಸುರಕ್ಷಿತವಾಗಿ ಬಂದಿರುವ ಕಾರಣ ಹಾಗೂ ಮಹಿಳಾ ದಿನಾಚರಣೆಯ ಪ್ರಯುಕ್ತ ಮಂಗಳವಾರ ಪ್ರಿಯಾ ಪಾಟೀಲ್‌ಗೆ ಜಿಲ್ಲಾ ವೀರಶೈವ ಸಮಾಜ, ಹಿಂದೂ ಜಾಗೃತಿ ಸೇನೆಯ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೋಷಕರ ಆಸೆಯಂತೆ ವೈದ್ಯಳಾಗುವ ಕನಸು ಕಂಡಿದ್ದೆ. ಆದರೆ, ಇನ್ಮುಂದೆ ಉಕ್ರೇನ್ಗೆ ಹೋಗಿ ಶಿಕ್ಷಣ ಮುಂದುವರಿಸುವ ವಾತಾವರಣ ಇಲ್ಲ. ಹಾಗಾಗಿ ಭಾರತ ಸರ್ಕಾರ ನಮಗೆ ಇಲ್ಲಿಯೇ ಎಂಬಿಬಿಎಸ್ ಮುಂದುವರೆಸಲು ಅವಕಾಶ ಮಾಡಿಕೊಡಬೇಕೆಂದು ತಮ್ಮ ಅಳಲನ್ನು ತೋಡಿಕೊಂಡರು.
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಎಂಬಿಬಿಎಸ್ 4ನೇ ಸೆಮಿಸ್ಟರ್ ಓದುತ್ತಿದ್ದ ಪ್ರಿಯಾ ಯುದ್ದ ಆರಂಭವಾದ ನಂತರ ಎರಡು ದಿನ ಮೆಟ್ರೋ ಸ್ಟೇಷನ್ ಮತ್ತು ಎಂಟು ದಿನ ಬಂಕರ್‌ನಲ್ಲಿ ಕಾಲ ಕಳೆದಿದ್ದರು. ಬಳಿಕ ಖಾರ್ಕಿವ್‌ನಿಂದ ಪೋಲೆಂಡ್ ಗಡಿವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಪೋಲೆಂಡ್ ಗಡಿಯಲ್ಲಿ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಸಹಾಯದಿಂದ ಭಾರತಕ್ಕೆ ಆಗಮಿಸಿದ್ದಾರೆ.









