ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನ ಖ್ಯಾತ ಹಾಸ್ಯ ನಟ ಮೋಹಿತ್ ಬಾಗೆಲ್ ಅವರು ವಿಧಿವಶರಾಗಿದ್ದಾರೆ. 27 ವರ್ಷದ ಮೋಹಿತ್ ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ನೋಯ್ಡಾದಲ್ಲಿ ಕೊನೆಯುಸಿರೆಳಿದ್ದಾರೆ. ಮೋಹಿತ್ ಉತ್ತರ ಪ್ರದೇಶದ ಮಥುರಾ ಮೂಲದವರು. ನೋಯ್ಡಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಳೆದ ಮೇ 14ರಂದು ಕೀಮೋಥೆರಪಿ ಮಾಡಿಸಿಕೊಂಡಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮೋಹಿತ್ ನಿಧನದ ಸುದ್ದಿ ಕೇಳಿ ನಟಿ ಪರಿಣೀತಿ ಚೋಪ್ರಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. “ನಾನು ಕೆಲಸ ಮಾಡಿದ ಉತ್ತಮ ಜನರಲ್ಲಿ ಮೋಹಿತ್ ಒಬ್ಬರು. ಯಾವಾಗಲು ಸಂತೋಷ ಮತ್ತು ಪಾಸಿಟಿವ್ ಆಗಿರುವ ವ್ಯಕ್ತಿಯಾಗಿದ್ದರು. ಲವ್ ಯೂ ಮೋಹಿತ್” ಎಂದು ಬರೆದುಕೊಂಡಿದ್ದಾರೆ.
ಬಾಲಕಲಾವಿದನಾಗಿ, ಸ್ಟ್ಯಾಂಡ್ ಅಪ್ ಕಾಮಿಡಿ ಮತ್ತು ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ಮೋಹಿತ್, ಸಲ್ಮಾನ್ ಖಾನ್ ಅಭಿನಯದ ರೆಡಿ ಸಿನಿಮಾದ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿದ್ದರು.
ಇನ್ನು ಇದುವರೆಗೂ ಮೋಹಿತ್ ಸುಮಾರು 10 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಮೋಹಿತ್ ಬಂಟಿ ಔರ್ ಬಬ್ಲಿ-2 ಸಿನಿಮಾದಲ್ಲಿ ಮೋಹಿತ್ ಬ್ಯುಸಿಯಾಗಿದ್ದರು. ಇನ್ನೂ ಸಾಕಷ್ಟು ಸಿನಿಮಾಗಳು ಅವರ ಕೈಯಲ್ಲಿದ್ದವು. ಆದರೆ ಕನಸುಗಳೆಲ್ಲವು ನನಸಾಗುವ ಮೊದಲೇ ಮೋಹಿತ್ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ.






