ಮಾ.12ಕ್ಕೆ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ
ಬೆಂಗಳೂರು : ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ನಕಾಶೆಯನ್ನು 45 ಲಕ್ಷ ರೈತರಿಗೆ ತಲುಪಿಸಲು ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರಲಿದೆ.
ಇದೇ ತಿಂಗಳ 12 ರಂದು ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಜೆಡಿಎಸ್ ನ ಗೋವಿಂದರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 12ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಏಕಕಾಲಕ್ಕೆ ರಾಜ್ಯಾದ್ಯಂತ ಶಾಸಕರು, ಸಚಿವರು, ಸಂಸದರು, ಕೆಳಹಂತದ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗಳ ಹಂತದವರೆಗೆ ರೈತರ ಮನೆ ಬಾಗಿಲಿಗೆ ಹೋಗಿ ಸರ್ಕಾರದ ಸೌಲಭ್ಯ ಒದಗಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
5 ವರ್ಷಗಳಿಗೊಮ್ಮೆ ಉಚಿತವಾಗಿ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ನಕಾಶೆಯನ್ನು ನೀಡುವ ಅವಕಾಶ ಕಾನೂನಿನಲ್ಲಿಯೇ ಇದೆ. ಇದುವರೆಗೂ ಇದನ್ನು ಯಾರೂ ಬಳಸಿಕೊಂಡಿರಲಿಲ್ಲ.
ಅದನ್ನು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದೇ ದಿನ 45 ಲಕ್ಷ ಜನರ ಮನೆ ಬಾಗಿಲಿಗೆ ಪಹಣಿ ಸೇರಿದಂತೆ ಇನ್ನಿತರ ಸೌಲಭ್ಯವನ್ನು ನೀಡುವ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಪೋಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗೀರ್ಲಹಳ್ಳಿ ಗ್ರಾಮದಲ್ಲಿ ಮಾರ್ಚ್ 12 ರಂದು ಚಾಲನೆ ನೀಡಲಿದ್ದಾರೆ.
Pahini caste-income certificate is coming to your doorstep says minister R ashok









